ಮಡಿಕೇರಿ, ಆ. ೨೫: ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಕೊಡಗು ಜಿಲ್ಲೆಯ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಗುರುವಾರ ನೀರಸ ವಾತಾವರಣ ಕಂಡು ಬಂದಿತು. ಸಿದ್ದರಾಮಯ್ಯ ಅವರ ಕೊಡಗು ಭೇಟಿ ಹಾಗೂ ಇದರೊಂದಿಗೆ ನಡೆದ ಘಟನಾವಳಿಗಳ ಹಿನ್ನೆಲೆಯಲ್ಲಿ ತಾ. ೨೬ರ ಶುಕ್ರವಾರದ ದಿನ (ಇಂದು) ಮಡಿಕೇರಿ ಮತ್ತೆ ಭಾರೀ ಸುದ್ದಿಗೆ ಎಡೆಯಾಗುವ ಸನ್ನಿವೇಶ ನಿರ್ಮಾಣವಾಗಿತ್ತು.

ಕಾಂಗ್ರೆಸ್ ಪಕ್ಷದ ಮಡಿಕೇರಿ ಚಲೋ ಹಾಗೂ ಬಿಜೆಪಿಯ ಜನಜಾಗೃತಿ ಸಮಾವೇಶದ ಘೋಷಣೆಯಿಂದಾಗಿ ಒಂದು ರೀತಿಯ ಆತಂಕ ಎದುರಾಗಿತ್ತು. ಆದರೆ ಜಿಲ್ಲಾಡಳಿತ ಇದನ್ನು ಗಂಭೀರ ವಾಗಿ ಪರಿಗಣಿಸಿ ನಿನ್ನೆಯಿಂದಲೇ ನಿಷೇಧಾಜ್ಞೆ ಜಾರಿ ಮಾಡಿದೆ. ಪರಿಣಾಮ ಪ್ರತಿಭಟನೆಗಳನ್ನು ಎರಡೂ ಪಕ್ಷಗಳು ಸದ್ಯಕ್ಕೆ ಕೈಬಿಟ್ಟಿದ್ದರೂ ನಿಷೇಧಾಜ್ಞೆ ಆದೇಶ ಮುಂದುವರಿಸಲಾಗಿದೆ.

ನಿಷೇಧಾಜ್ಞೆಯೊAದಿಗೆ ಮದ್ಯ ಮಾರಾಟಕ್ಕೂ ನಿನ್ನೆ ರಾತ್ರಿಯಿಂದ ‘ಬ್ರೇಕ್’ ಬಿದ್ದಿದೆ. ಇದರಿಂದಾಗಿ ಇಂದು ದಿನವಿಡೀ ಮಡಿಕೇರಿ ಸೇರಿದಂತೆ ಜಿಲ್ಲಾದ್ಯಂತ ನೀರಸ ರೀತಿಯ ವಾತಾವರಣದೊಂದಿಗೆ ಜನ ಸಂಚಾರವೂ ವಿರಳವಾದಂತಿತ್ತು. ಎಲ್ಲೆಡೆಗಳಲ್ಲಿ ಪೊಲೀಸ್ ಪಡೆಗಳು ಬಂದೋಬಸ್ತ್ನಲ್ಲಿ ತೊಡಗಿಸಿ ಕೊಂಡಿವೆ. ಪೂರ್ವ ನಿಗದಿತ ಕಾರ್ಯ ಕ್ರಮಗಳನ್ನು ಹೊರತುಪಡಿಸಿದರೆ ಇನ್ನು ಯಾವದೇ ರೀತಿಯ ಚಟುವಟಿಕೆಗಳು ಇರಲಿಲ್ಲ. ವ್ಯಾಪಾರ - ವಹಿವಾಟುಗಳೂ ಕುಂಠಿತವಾಗಿತ್ತು. ಜಿಲ್ಲೆಯ ಸಂತೆಗಳೂ ರದ್ದಾಗಿವೆ. ಮಡಿಕೇರಿ ಮಾರುಕಟ್ಟೆಯಲ್ಲಿ ಸಂತೆಯ ಮುನ್ನಾ ದಿನವಾದ ಇಂದು ಹಲವು ಗ್ರಾಮೀಣ ಭಾಗದ ವ್ಯಾಪಾರಿಗಳು ಸಾಮಗ್ರಿಗಳೊಂದಿಗೆ ಆಗಮಿಸಿದ್ದ ರಾದರೂ ಗ್ರಾಹಕರಿಲ್ಲದೆ ಪರದಾಡುತ್ತಿದ್ದರು.