ಮಡಿಕೇರಿ, ಆ. ೨೫: ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಸಂಘ ಪ್ರಕಟಿಸಿತು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಘದ ಪ್ರಧಾನ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ಮಹಿಳಾ ಲೇಖಕರನ್ನು ಒಗ್ಗೂಡಿಸುವ ಸಲುವಾಗಿ ೨೦೧೨ ರಲ್ಲಿ ಸಂಘ ಆರಂಭಗೊAಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕವನ ವಾಚನ, ವಿಷಯ ಮಂಡನೆ, ಉಪನ್ಯಾಸ, ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ, ಮಕ್ಕಳ ಕವಿಗೋಷ್ಠಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ಸಂಘದ ನೂತನ ಅಧ್ಯಕ್ಷರಾಗಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಉಪಾಧ್ಯಕ್ಷರಾಗಿ ಬೇಬಿ ಚಿಣ್ಣಪ್ಪ, ಡಾ.ಕಾವೇರಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ರೇವತಿ ರಮೇಶ್, ಸಹಕಾರ್ಯದರ್ಶಿಯಾಗಿ ಕಡ್ಲೇರ ತುಳಸಿ ಮೋಹನ್, ಕೋಶಾಧಿಕಾರಿಯಾಗಿ ಕಟ್ರತನ ಲಲಿತಾ, ನಿರ್ದೇಶಕರುಗಳಾಗಿ ಚೊಕ್ಕಾಡಿ ಪ್ರೇಮಾ ರಾಘವಯ್ಯ, ತೆನ್ನೀರ ರಾಧ ಪೊನ್ನಪ್ಪ, ಕೂಪದೀರ ಸುಂದರಿ ಮಾಚಯ್ಯ, ರುಬಿನಾ, ಸಂಗೀತಾ ರವಿರಾಜ್, ಸಹನಾ ಕಾಂತಬೈಲು, ಶ್ವೇತಾ ರವೀಂದ್ರ, ಕೆ.ಜಿ. ರಮ್ಯ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ನೂತನ ಅಧ್ಯಕ್ಷೆ ಶೋಭಾ ಸುಬ್ಬಯ್ಯ ಮಾತನಾಡಿ, ಜಿಲ್ಲೆಯಲ್ಲಿ ಮಹಿಳಾ ಬರಹಗಾರರನ್ನು ಸಂಘಟಿಸುವ ಸಲುವಾಗಿ ವೇದಿಕೆ ಕೆಲಸ ಮಾಡುತ್ತಿದ್ದು, ಮಹಿಳಾ ಬರಹಗಾರರಿಗೆ ಶಿಬಿರ, ವಿಚಾರ ಸಂಕಿರಣ, ತರಬೇತಿಯನ್ನು ಹಮ್ಮಿಕೊಳ್ಳಲಾಗುವುದು. ೧೮ ವರ್ಷ ಮೇಲ್ಪಟ್ಟ ಮಹಿಳಾ ಸಾಹಿತಿಗಳಿಗೆ ಸದಸ್ಯತ್ವ ನೀಡಲಾಗುತ್ತದೆ. ಮಹಿಳಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಂಘಟಿಸುವುದು, ಕನ್ನಡ ಪರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸುವುದು ಸಂಘದ ದ್ಯೇಯೋದ್ದೇಶಗಳಾಗಿವೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ನಾಯಕಂಡ ಬೇಬಿ ಚಿಣ್ಣಪ್ಪ, ಉಪಕಾರ್ಯದರ್ಶಿ ಡಾ.ಕಾವೇರಿ ಪ್ರಕಾಶ್, ಖಜಾಂಜಿ ಕಟ್ರತನ ಲಲಿತಾ ಅಯ್ಯಣ್ಣ, ಮಾಜಿ ಅಧ್ಯಕ್ಷೆ ಕಸ್ತೂರಿ ಗೋವಿಂದಮಯ್ಯ ಹಾಜರಿದ್ದರು.