ಭೀಕರ ರಸ್ತೆ ಅಪಘಾತದಲ್ಲಿ ೯ ಕಾರ್ಮಿಕರು ಮೃತ
ತುಮಕೂರು, ಆ. ೨೫: ಗುರುವಾರ ನಸುಕಿನ ಜಾವ ತುಮಕೂರು ಜಿಲ್ಲೆಯ ಶಿರಾ ಹತ್ತಿರ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ೯ ಮಂದಿ ಮೃತಪಟ್ಟಿದ್ದಾರೆ. ೧೦ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ತಕ್ಷಣಕ್ಕೆ ಶಿರಾದಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದ್ದು, ಕ್ರೂಸರ್ನಲ್ಲಿದ್ದವರೆಲ್ಲಾ ರಾಯಚೂರು ಜಿಲ್ಲೆಯ ಕೂಲಿ ಕಾರ್ಮಿಕರು ಎಂದು ತಿಳಿದುಬಂದಿದೆ. ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಈ ಘೋರ ದುರಂತ ಸಂಭವಿಸಿದೆ. ನಸುಕಿನ ಜಾವ ರಾಯಚೂರು ಜಿಲ್ಲೆಯ ಹಾಗೂ ಉತ್ತರ ಕರ್ನಾಟಕದ ಬಡ ಕೂಲಿ ಕಾರ್ಮಿಕರನ್ನು ಹೊತ್ತ ಕ್ರೂಸರ್ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿತ್ತು. ಶಿರಾ ಬಳಿ ಬರುತ್ತಿದ್ದಾಗ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡು ಡಿಕ್ಕಿಯಾಗಿ ಸ್ಥಳದಲ್ಲಿಯೇ ೯ ಜನ ಕಾರ್ಮಿಕರು ಮೃತಪಟ್ಟಿದ್ದಾರೆ. ಕ್ರೂಸರ್ನಲ್ಲಿ ೨೦ ಜನರಿದ್ದು, ರಾಯಚೂರು ಜಿಲ್ಲೆಯರು ಎನ್ನಲಾಗುತ್ತಿದೆ. ಮೃತರಲ್ಲಿ ಮೂವರು ಮಹಿಳೆಯರು, ನಾಲ್ವರು ಪುರುಷರು, ಇಬ್ಬರು ಮಕ್ಕಳು ಸೇರಿ ಒಟ್ಟು ೯ ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ೧೧ ಜನ ಗಾಯಾಳುಗಳನ್ನ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಮೃತಪಟ್ಟ ೯ ಮಂದಿ ಕೂಲಿ ಕಾರ್ಮಿಕರ ಕುಟುಂಬಸ್ಥರಿಗೆ ಪ್ರಧಾನ ಮಂತ್ರಿ ನೈಸರ್ಗಿಕ ವಿಕೋಪ ಪರಿಹಾರ ನಿಧಿಯಿಂದ ತಲಾ ೨ ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಘಟನೆ ಬಗ್ಗೆ ತೀವ್ರ ಕಂಬನಿ ಮಿಡಿದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮವರನ್ನು ಕಳೆದುಕೊಂಡವರ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಮೃತರ ಕುಟುಂಬಸ್ಥರಿಗೆ ತಲಾ ೨ ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ ೫೦ ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ಈದ್ಗಾ ಮೈದಾನ ವಿವಾದ: ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಸೂಚನೆ
ಬೆಂಗಳೂರು, ಆ. ೨೫: ಚಾಮರಾಜಪೇಟೆ ಈದ್ಗಾ ಮೈದಾನ ಮಾಲೀಕತ್ವ ವಿವಾದಕ್ಕೆ ಸಂಬAಧಿಸಿದAತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಇಂದು ತೀರ್ಪು ನೀಡಿದೆ. ವಿವಾದಿತ ಈದ್ಗಾ ಮೈದಾನವನ್ನು ಆಟದ ಮೈದಾನವಾಗಿ ಮಾತ್ರ ಬಳಸಬೇಕೆಂದು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ತೀರ್ಪು ನೀಡಿದ್ದು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ ೨೩ಕ್ಕೆ ಮುಂದೂಡಿದ್ದಾರೆ. ರಂಜಾನ್, ಬಕ್ರೀದ್ ವೇಳೆ ಪ್ರಾರ್ಥನೆಗೆ ಬಳಸಲು ಅವಕಾಶ ನೀಡಿರುವ ನ್ಯಾಯಾಲಯ, ಬೇರೆ ಯಾವುದೇ ರೀತಿಯ ಆಚರಣೆಗೆ ಬಳಸದಂತೆ ಸ್ಪಷ್ಟಪಡಿಸಿದೆ. ಇದರಿಂದಾಗಿ ಈ ಬಾರಿ ಗಣೇಶೋತ್ಸವ ಆಚರಣೆಗೆ ಅವಕಾಶ ಸಿಗದಂತಾಗಿದೆ.
ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ
ಶ್ರೀನಗರ, ಆ. ೨೫: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಭದ್ರತಾ ಪಡೆಗಳು ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿ, ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿವೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನ ಕಮಲ್ಕೋಟೆ ಪ್ರದೇಶದ ಮಡಿಯನ್ ನಾನಕ್ ಪೋಸ್ಟ್ ಬಳಿ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಗಿದೆ. ಸೈನ್ಯ ಮತ್ತು ಬಾರಾಮುಲ್ಲಾ ಪೊಲೀಸರು ಉರಿಯ ಕಮಲ್ ಕೋಟೆ ಸೆಕ್ಟರ್ನಲ್ಲಿರುವ ಮಡಿಯನ್ ನಾನಕ್ ಪೋಸ್ಟ್ ಬಳಿ ಮೂವರು ನುಸುಳುಕೋರರನ್ನು ಹತ್ಯೆ ಮಾಡಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಸೆಪ್ಟೆಂಬರ್ ೧೨ ರಿಂದ ೧೦ ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ
ಬೆಂಗಳೂರು, ಆ. ೨೫: ಸೆಪ್ಟೆಂಬರ್ ೧೨ರಿಂದ ೧೦ ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವಿಧಾನಸೌಧದಲ್ಲಿ ೧೦ ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ, ಹೈಕೋರ್ಟ್ ಆದೇಶದಂತೆ ಭ್ರಷ್ಟಾಚಾರ ನಿಗ್ರಹ ದಳ, ಲೋಕಾಯುಕ್ತದೊಂದಿಗೆ ವಿಲೀನವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸುವ ಸಾಧ್ಯತೆಯಿದೆ. ಸರ್ಕಾರ ವಿರುದ್ಧ ಗುತ್ತಿಗೆದಾರರ ಸಂಘ ಕಮಿಷನ್ ಆರೋಪ ಮಾಡಿದ ನಂತರ ವಿಧಾನಮಂಡಲ ಅಧಿವೇಶನ ಕರೆಯಬೇಕೆಂದು ವಿಪಕ್ಷ ಕಾಂಗ್ರೆಸ್ ತೀವ್ರ ಒತ್ತಾಯಿಸಿತ್ತು. ಈ ಬಾರಿಯ ಅಧಿವೇಶನದಲ್ಲಿ ಸರ್ಕಾರದ ಮೇಲಿನ ಕಮಿಷನ್ ಆರೋಪ, ಕರಾವಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಧರ್ಮ ದಂಗಲ್, ಮಳೆ, ಪ್ರವಾಹ ವಿಪತ್ತು ಪರಿಹಾರ ಕುರಿತು ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ತೀವ್ರ ಚರ್ಚೆ, ಕೋಲಾಹಲ ನಡೆಯುವ ಸಾಧ್ಯತೆಯಿದೆ.
ತೇಜಸ್ವಿ ಪ್ರತಿಷ್ಠಾನದ ಸದಸ್ಯರಾಗಿ ದಿವಂಗತ ರಾಜೇಶ್ವರಿ ನೇಮಕ!
ಬೆಂಗಳೂರು, ಆ. ೨೫: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಮಾಡುವಲ್ಲಿ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಜೀವಂತ ಇಲ್ಲದವರಿಗೂ ಪ್ರತಿಷ್ಠಾನದ ಸದಸ್ಯ ಸ್ಥಾನ ನೀಡಿರುವ ಸರ್ಕಾರ ಮುಜುಗರಕ್ಕೊಳಗಾಗಿದೆ. ದಿವಂಗತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಪತ್ನಿ ದಿವಂಗತ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿಗೂ ಸದಸ್ಯ ಸ್ಥಾನ ನೀಡಿ ಸರ್ಕಾರ ಮಹಾ ಎಡವಟ್ಟು ಮಾಡಿದೆ. ಚಿಕ್ಕಮಗಳೂರಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾಗಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಹೆಸರನ್ನು ಆಯ್ಕೆ ಮಾಡಲಾಗಿದೆ. ಖ್ಯಾತ ಲೇಖಕ ಹಾಗೂ ಚಿಂತಕ ಪೂರ್ಣಚಂದ್ರ ತೇಜಸ್ವಿಯವರ ಪತ್ನಿ ಲೇಖಕಿ ರಾಜೇಶ್ವರಿ ಅವರು ಕಳೆದ ಡಿಸೆಂಬರ್ ತಿಂಗಳಲ್ಲಿ ನಿಧನರಾಗಿದ್ದಾರೆ. ಆದರೆ, ಮೃತರ ಹೆಸರು ಇದೀಗ ಪ್ರತಿಷ್ಠಾನದ ಸದಸ್ಯರ ಪಟ್ಟಿಯಲ್ಲಿರುವುದು ಅಚ್ಚರಿ ಉಂಟು ಮಾಡಿದೆ. ರಾಜ್ಯ ಸರ್ಕಾರದ ಈ ಎಡವಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಡವಟ್ಟಿನಿಂದ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಇದು ತಪ್ಪಾಗಿ ಸೇರ್ಪಡೆಯಾದ ಹೆಸರಾ ಅಥವಾ ಅದೇ ಹೆಸರಿನ ಬೇರೆಯವರಾ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.
ಕಳವಾಗಿದ್ದ ಐತಿಹಾಸಿಕ ಕಲಾಕೃತಿಗಳು ಭಾರತಕ್ಕೆ ರವಾನೆ
ಎಡಿನ್ ಬರ್ಗ್, ಆ. ೨೫: ಇತಿಹಾಸದಲ್ಲಿ ಇದೇ ಮೊದಲು ಎಂಬAತೆ ಭಾರತದಿಂದ ಕಳವಾಗಿದ್ದ ಐತಿಹಾಸಿಕ ಕಲಾಕೃತಿಗಳನ್ನು ಭಾರತಕ್ಕೆ ಮರಳಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಗ್ಲ್ಯಾಸ್ಗೋ ಸರ್ಕಾರಗಳು ಸಹಿ ಹಾಕಿವೆ. ಗ್ಲ್ಯಾಸ್ಗೋ ಮೂಲದ ವಸ್ತು ಸಂಗ್ರಹಾಲಯವು ಭಾರತಕ್ಕೆ ಏಳು ಕಲಾಕೃತಿಗಳನ್ನು ನೀಡುತ್ತಿದ್ದು, ಕಳವಾಗಿದ್ದ ವಸ್ತುಗಳನ್ನು ಮರಳಿಸುವಿಕೆಗೆ ಸಂಬAಧಿಸಿದAತೆ ಭಾರತ ಸರ್ಕಾರದೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. ೧೪ನೇ ಶತಮಾನದ ಇಂಡೋ - ಪರ್ಷಿಯನ್ ಖಡ್ಗ ಸೇರಿದಂತೆ ಏಳು ಕಲಾಕೃತಿಗಳನ್ನು ಬ್ರಿಟನ್ನಿಂದ ಮೊದಲ ಬಾರಿಗೆ ಸ್ವದೇಶಕ್ಕೆ ಹಿಂದಿರುಗಿಸಲು ನಿರ್ಧರಿಸಿದೆ. ಗ್ಲ್ಯಾಸ್ಗೋ ಲೈಫ್ ನಗರದ ವಸ್ತುಸಂಗ್ರಹಾಲಯಗಳನ್ನು ನಡೆಸುವ ದತ್ತಿ ಸಂಸ್ಥೆಯಾಗಿದೆ. ಇದು ಈ ವರ್ಷದ ಆರಂಭದಲ್ಲಿ ಹಸ್ತಾಂತರವನ್ನು ದೃಢಪಡಿಸಿತು ಎನ್ನಲಾಗಿದೆ. ಇಂಡೋ - ಪರ್ಷಿಯನ್ ಖಡ್ಗ ಸೇರಿದಂತೆ ಆರು ವಸ್ತುಗಳನ್ನು ೧೪ನೇ ಶತಮಾನದ ಕೆತ್ತನೆಗಳು ಮತ್ತು ೧೧ನೇ ಶತಮಾನದ ಕಲ್ಲಿನ ಬಾಗಿಲು ಜಾಮ್ಗಳನ್ನು ಒಳಗೊಂಡಿವೆ. ಅವುಗಳನ್ನು ೧೯ನೇ ಶತಮಾನದಲ್ಲಿ ದೇವಾಲಯಗಳಿಂದ ಕದಿಯಲಾಗಿತ್ತು. ಏಳನೆಯ ವಸ್ತುವು ವಿಧ್ಯುಕ್ತ ಖಡ್ಗವಾಗಿದೆ ಮತ್ತು ೧೯೦೫ ರಲ್ಲಿ ಹೈದರಾಬಾದಿನ ನಿಜಾಮರ ಸಂಗ್ರಹದಿAದ ಅವರ ಪ್ರಧಾನ ಮಂತ್ರಿಯಿAದ ಕದಿಯಲಾಗಿದೆ ಎಂದು ತಿಳಿದು ಬಂದಿದೆ.