ಮಡಿಕೇರಿ, ಆ. ೨೪: ಚೆಂಬು ಗ್ರಾಮದ ಶ್ರೀ ಭಗವಾನ್ ಸಂಘದ ಸಾಮಾಜಿಕ ಕಾರ್ಯದಿಂದಾಗಿ ಪ್ರವಾಹದಿಂದ ಬದುಕು ಅತಂತ್ರವಾಗಿದ್ದ ವಿಶೇಷಚೇತನ ದಂಪತಿಗೆ ಮರುಜೀವ ಸಿಕ್ಕಂತಾಗಿದೆ.

ಸಂಪಾಜೆ ಗ್ರಾಮದಲ್ಲಿ ಇತ್ತೀಚೆಗೆ ಉಂಟಾದ ಭಾರೀ ಪ್ರವಾಹದಿಂದಾಗಿ ಹಲವಾರು ಮನೆಗಳು ನೆಲಸಮವಾಗಿದ್ದವು. ಗ್ರಾಮದ ವಿಶೇಷಚೇತನ ಬಾಲಕೃಷ್ಣ ಆಚಾರಿ ಅವರ ಮನೆಯು ಪಯಸ್ವಿನಿ ನದಿಯ ಬದಿ ಇದ್ದು, ನದಿ ಉಕ್ಕಿ ಹರಿದ ಪರಿಣಾಮ ಪ್ರವಾಹಕ್ಕೆ ತುತ್ತಾಗಿತ್ತು. ಜಿಲ್ಲಾಡಳಿತದಿಂದ ತೆರೆಯಲಾಗಿದ್ದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊAಡಿದ್ದ ಬಾಲಕೃಷ್ಣ ಹಾಗೂ ಅವರ ವಿಶೇಷಚೇತನ ಪತ್ನಿ, ಮಳೆ ಇಳಿಮುಖಗೊಂಡ ಬಳಿಕ ಜಿಲ್ಲಾಡಳಿತದ ಸೂಚನೆಯಂತೆ ತಮ್ಮ ಮನೆಗೆ ವಾಪಸ್ಸು ತೆರಳಿದರು.

ಆದರೆ, ತಮ್ಮ ಮನೆಯು ವಾಸಕ್ಕೆ ಅಯೋಗ್ಯವಾಗಿದ್ದು, ಪ್ರವಾಹದಿಂದ ಮನೆಯಲ್ಲಿ ಪ್ರಮುಖ ವಸ್ತುಗಳು ನೀರುಪಾಲಾಗಿದ್ದವು. ವಿಶೇಷಚೇತನರ ಮಾಸಾಶನದಿಂದ ಕುಟುಂಬ ನಿರ್ವಹಣೆಯಾಗುತ್ತಿದ್ದು, ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದನ್ನು ಗಮನಿಸಿದ ಭಗವಾನ್ ಯುವಕ ಸಂಘದ ಯುವಕರು ಮನೆ ದುರಸ್ತಿ ಕಾರ್ಯಕ್ಕೆ ಮುಂದಾದರು.

ಸಗಣಿ ಸಾರಿಸಿ ನಿರ್ಮಿಸಲಾಗಿದ್ದ ಮನೆಯ ನೆಲವು ಸಂಪೂರ್ಣ ದುಸ್ಥಿತಿ ತಲುಪಿತ್ತು. ಇದೀಗ ಯುವಕ ಸಂಘದ ಕಾಳಜಿಯಿಂದ ಕಾಂಕ್ರೀಟ್ ನೆಲ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಟೈಲ್ಸ್ ಹಾಗೂ ಬಣ್ಣ ಬಳಿಯುವ ಕೆಲಸ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ ಎಂದು ಸಂಘದ ಗೌರವಾಧ್ಯಕ್ಷ ಅನಂತ್ ಊರುಬೈಲು ಅವರು ತಿಳಿಸಿದ್ದಾರೆ. ಮನೆಯ ಹೊರಾವರಣದಲ್ಲಿನ ಬಾವಿಯು ಹೂಳಿಂದ ತುಂಬಿದ್ದು, ಅದನ್ನು ಸ್ವಚ್ಛಗೊಳಿಸಿದ ಸ್ವಯಂ ಸೇವಕರು ಕುಟುಂಬಕ್ಕೆ ಕುಡಿಯುವ ನೀರಿನ ವ್ಯವಸ್ಥೆಗೆ ಸಹಾಯ ಮಾಡಿದ್ದಾರೆ. ಸರಕಾರದಿಂದ ಸಂತ್ರಸ್ತರಿಗೆ ದೊರಕುವ ಪರಿಹಾರವು ವಿಳಂಬವಾಗುವುದು ಸಹಜ. ಆದರೆ ತುರ್ತು ಪರಿಹಾರ ಅಗತ್ಯವಿದ್ದ ಈ ಕುಟುಂಬಕ್ಕೆ ೨೦೧೭ ರಂದು ಸ್ಥಾಪಿತಗೊಂಡ ಭಗವಾನ್ ಯುವಕ ಸಂಘವೇ ಪರಿಹಾರದ ದಾರಿಯಾಗಿದೆ. ಈ ಹಿಂದೆ ಬಾಲಕೃಷ್ಣ ಅವರಿಗೆ ನಡೆದಾಡಲು ‘ವಾಕರ್’ ಅನ್ನು ಕೂಡ ಸಂಘದ ವತಿಯಿಂದ ವಿತರಿಸಲಾಗಿದೆ. ಅಲ್ಲದೇ ಲಯನ್ಸ್ ಕ್ಲಬ್ ವತಿಯಿಂದ ಕೂಡ ಕೆಲವು ಅಡುಗೆಮನೆಯ ಸಾಮಗ್ರಿಗಳನ್ನು ಕುಟುಂಬಕ್ಕೆ ನೀಡಲಾಗಿದೆ. ಮನೆ ದುರಸ್ತಿ ಸಂದರ್ಭ ಸಂಘದ ಅಧ್ಯಕ್ಷ ಯತೀಶ್, ಕಾರ್ಯದರ್ಶಿ ಶರತ್, ಸಂಯೋಜಕ ಶರತ್ ಕಾಸ್ಪಾಡಿ ಹಾಗೂ ಇತರರು ಇದ್ದರು.