ವೀರಾಜಪೇಟೆ, ಆ. ೨೪: ಹಾಡಹಗಲೆ ವೃದ್ಧೆಯೊಬ್ಬರ ಕತ್ತಿನಿಂದ ಚಿನ್ನದ ಸರ ಕದಿಯಲು ಯತ್ನಿಸಿದ ಘಟನೆ ನಗರದ ಹೃದಯ ಭಾಗದಲ್ಲಿ ನಡೆದಿದೆ.

ಕಕ್ಕಬ್ಬೆ ನಿವಾಸಿಯಾಗಿರುವ ಕಾವೇರಮ್ಮ (೬೫) ಅವರು ನಗರಕ್ಕೆ ಆಗಮಿಸಿ ಗಣಪತಿ ದೇವಸ್ಥಾನ ಸನಿಹ ಆಸ್ಪತ್ರೆಗೆ ತೆರಳುವ ದಾರಿಯಲ್ಲಿ ಜೌಷಧಿ ಕೇಂದ್ರ ಬಳಿ ಜೌಷಧಿ ಖರೀದಿಗಾಗಿ ನಿಂತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಕಾವೇರಮ್ಮ ಅವರ ಕಣ್ಣಿಗೆ ಖಾರದ ಹುಡಿ ಎರಚಿ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಲು ಯತ್ನಿಸಿದ್ದಾನೆ. ಕಾವೇರಮ್ಮ ಅವರು ತಮ್ಮ ಕೈಯಲ್ಲಿದ್ದ ಕೊಡೆಯಿಂದ ಆ ವ್ಯಕ್ತಿಯ ಮೇಲೆ ಪ್ರಹಾರ ಮಾಡಲು ಮುಂದಾದರಾದರೂ ಕಣ್ಣಿಗೆ ಖಾರದ ಹುಡಿ ಹಾಕಿದ್ದುದರಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಈ ಸಂದರ್ಭ ಆ ವ್ಯಕ್ತಿಯು ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯ ಬಗ್ಗೆ ವೀರಾಜಪೇಟೆ ನಗರ ಠಾಣೆಯಲ್ಲಿ ಕಾವೇರಮ್ಮ ಅವರು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ವ್ಯಕ್ತಿಯೋರ್ವ ಬುರ್ಕ ಧರಿಸಿಕೊಂಡು ತನ್ನ ಮೇಲೆ ಖಾರದ ಹುಡಿ ಎರಚಿ ಸರವನ್ನು ಕದಿಯಲು ಯತ್ನ ನಡೆಸಿರುವುದಾಗಿ ತಿಳಿಸಿದ್ದಾರೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. -ಕೆ.ಕೆ.ಎಸ್.