ಸುಂಟಿಕೊಪ್ಪ,ಆ.೨೫: ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ ಕ್ರೀಡಾ ಮನೋಭಾವನೆ ಯಿಂದ ಸೋಲನ್ನು ಸ್ವೀಕರಿಸಬೇಕು. ಮುಂದೆ ಸೋಲೇ ಗೆಲುವಿನ ಸೋಪಾನವಾಗಲಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೇದಮೂರ್ತಿ ಹೇಳಿದರು.

ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ವಲಯಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ನಡೆ ಗೆಲುವಿನ ಕಡೆಗಿರಲಿ ಎಂದೂ ಹಾರೈಸಿದರು.

ವಿದ್ಯಾರ್ಥಿಗಳ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿದ ಸುಂಟಿಕೊಪ್ಪ ಗ್ರಾ.ಪಂ.ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಕ್ರೀಡೆಯಲ್ಲಿ ಆಸಕ್ತಿ ಏಕಾಗ್ರತೆ ಪರಿಶ್ರಮ ಇದ್ದರೆ ಯಶಸ್ಸು ಕಾಣಬಹುದು. ಸುಂಟಿಕೊಪ್ಪ ಶಾಲೆಯ ಈ ಆಟದ ಮೈದಾನವನ್ನು ಅಭಿವೃದ್ಧಿಪಡಿಸಲು ಪಂಚಾಯಿತಿ ಮುಂದಾಗಿದೆ ಎಂದು ಹೇಳಿದರು. ಜಾವಮನೆ ಮುಸ್ತಾಫ ಅವರ ಜ್ಞಾಪಕಾರ್ಥವಾಗಿ ಅವರ ಸಹೋದರ ಹಂಸ ಅಚ್ಚಪ್ಪ ಅವರು ಕ್ರೀಡಾ ಟ್ರೋಫಿಯನ್ನು ಕೊಡುಗೆ ನೀಡಿದರು. ಸುಂಟಿಕೊಪ್ಪ ಗ್ರಾ.ಪಂ.ಅಧ್ಯಕ್ಷೆ ಶಿವಮ್ಮ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆಯ ಕ್ರೀಡಾ ಅಧೀಕ್ಷಕ ಮಲ್ಲೇಶ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವೇದಮ್ಮ, ಸುಂಟಿಕೊಪ್ಪ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಬಾಲಕೃಷ್ಣ, ಗ್ರಾ.ಪಂ.ಪಿಡಿಓ ವೇಣುಗೋಪಾಲ, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರು, ಗ್ರಾ.ಪಂ.ಸದಸ್ಯರುಗಳಾದ ಆಲಿಕುಟ್ಟಿ, ಶಬ್ಬೀರ್, ರಫೀಕ್‌ಖಾನ್, ಮಂಜುನಾಥ, ನಾಗರತ್ನ, ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗೀತಾ, ವಲಯ ಸಂಪನ್ಮೂಲ ಅಧಿಕಾರಿ ಸೀಮಾ ಉಪಸ್ಥಿತರಿದ್ದರು. ನಿವೃತ್ತ ದೈಹಿಕ ಅಧೀಕ್ಷಕ ವೆಂಕಟೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೇದಮೂರ್ತಿ ಅವರಿಗೆ ಈ ಸಂದರ್ಭ ಸನ್ಮಾನಿಸಲಾಯಿತು.