ಮುಳ್ಳೂರು, ಆ. ೨೩: ಶನಿವಾರಸಂತೆ ಹಾಗೂ ಹಂಡ್ಲಿ ಕ್ಲಸ್ಟರ್ ಮಟ್ಟದ ೨೦೨೨-೨೩ನೇ ಸಾಲಿನ ಪ್ರತಿಭಾ ಕಾರಂಜಿ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷೆ ಪರ್ಜಾನ್‌ಬಾನು ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮದ ವೇದಿಕೆಯಲ್ಲಿ ಅನಾವಣಗೊಳಿಸುವ ಮೂಲಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳ ಬೇಕೆಂದರು. ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು.

ಹಂಡ್ಲಿ ಕ್ಲಸ್ಟರ್ ಸಿಆರ್‌ಪಿ ಹೇಮಂತ್ ಪ್ರಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಲ್ಲಿರುವ ನಾನಾ ರೀತಿಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಶೈಕ್ಷಣಿಕ ಸಾಲಿನಲ್ಲಿ ಪ್ರತಿಭಾಕಾರಂಜಿ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ವೇದಿಕೆಯಲ್ಲಿ ವಿದ್ಯಾಸಂಸ್ಥೆ ನಿರ್ದೇಶಕರುಗಳಾದ ರಂಗಸ್ವಾಮಿ, ಮಹಮ್ಮದ್‌ಗೌಸ್, ಕಾರ್ಯದರ್ಶಿ ಜಗನ್‌ಪಾಲ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಇ.ಎಂ. ದಯಾನಂದ್, ಪ್ರೌಢಶಾಲಾ ಮುಖ್ಯ ಶಿಕ್ಷಕ ನರಸಿಂಹಮೂರ್ತಿ, ಶನಿವಾರಸಂತೆ ಕ್ಲಸ್ಟರ್ ಸಿಆರ್‌ಪಿ ದಿನೇಶ್, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರುಗಳಾದ ಕೆ.ಪಿ.ಜಯಕುಮಾರ್, ಡಿ.ಸುಜಲಾದೇವಿ, ವಿಕ್ರಾಂತ್, ಶಿವಪ್ರಕಾಶ್, ದೇವರಾಜ್, ಉಮಾ ಮುಂತಾದವರು ಹಾಜರಿದ್ದರು.