ಮೂರ್ನಾಡು, ಆ. ೨೪: ಮೂರ್ನಾಡು ಹೋಬಳಿ ಜಾನಪದ ಘಟಕದ ವತಿಯಿಂದ ಮೂರ್ನಾಡು ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣ ದಲ್ಲಿ ವಿಶ್ವ ಜಾನಪದ ದಿನವನ್ನು ಅರ್ಥಪೂರ್ಣವಾಗಿ ಆಚರಿಸ ಲಾಯಿತು. ಮುಖ್ಯ ಅತಿಥಿಗಳಾಗಿದ್ದ ಪ್ರೌಢಶಾಲೆಯ ಮುಖ್ಯೋಪಾಧ್ಯಾ ಯಿನಿ ರಶ್ಮಿ ಮಾತನಾಡಿ, ಜನಪದ ಎಂಬುದು ಜೀವನದ ತಿರುಳಿದ್ದಂತೆ. ಜನರು ನೋವು-ನಲಿವುಗಳನ್ನು ಹಾಡು ಹಸೆಯ ಮೂಲಕ ವ್ಯಕ್ತಪಡಿಸುತ್ತಿದ್ದರು. ಜನಪದ ಹಾಡುಗಳು, ಕತೆಗಳು ಇಂದಿಗೂ ಪ್ರಸ್ತುತವಾದದ್ದು. ನಮ್ಮ ಜೀವನ ಕ್ರಮದ ಆಧಾರವೇ ಜನಪದ ಎಂದು ನುಡಿದರು.

ಮತ್ತೋರ್ವ ಅತಿಥಿ ಮಮತಾ ಮಾತನಾಡಿ, ಇಂದಿನ ಯುವ ಜನತೆ ಜನಪದದ ಕಡೆಗೆ ಆಕರ್ಷಿತ ವಾಗುವಂತೆ ಮಾಡಬೇಕಾಗಿದೆ. ಯುವ ಜನತೆಯಿಂದ ಜನಪದವನ್ನು ಉಳಿಸುವುದು ಮತ್ತು ಮುಂದುವರಿಸಿ ಕೊಂಡು ಹೋಗುವುದು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂರ್ನಾಡು ಘಟಕದ ಅಧ್ಯಕ್ಷ ಪ್ರಶಾಂತ್ ಅವರು ಭಾರತ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ದೇಶ. ಇಲ್ಲಿ ಮಾರು ದೂರಕ್ಕೊಂದು ವಿಶಿಷ್ಟ ಸಂಸ್ಕೃತಿ ಇದೆ. ಆಚರಣೆಗಳು, ಹಬ್ಬಗಳು, ಹಾಡುಗಳು ಬೇರೆಬೇರೆಯಾದರೂ ಅವು ಸ್ಪುರಿಸುವ ಅರ್ಥ ಹಾಗೂ ತಿರುಳು ಒಂದೆ. ಯುವ ಜನತೆ ಜನಪದವನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಆಗ ಸಹಜವಾಗಿಯೇ ಅದರೆಡೆಗೆ ಆಕರ್ಷಣೆ ಬೆಳೆಯುತ್ತದೆ. ಜನಪದ ಉಳಿಯುತ್ತದೆ ಎಂದರು.

ಕಾರ್ಯಕ್ರಮವನ್ನು ದುಡಿ ಬಾರಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ವಿದ್ಯಾಸಂಸ್ಥೆಯ ಪ್ರಾಥಮಿಕ ವಿಭಾಗದಿಂದ ಹಿಡಿದು ಪದವಿ ವಿಭಾಗದವರೆಗಿನ ವಿದ್ಯಾರ್ಥಿಗಳು ಜನಪದ ಗೀತೆಯನ್ನು ಹಾಡಿ ನೆರೆದವರ ಮನಸೂರೆ ಗೊಂಡರು. ಕಾರ್ಯಕ್ರಮದಲ್ಲಿ ಮೂರ್ನಾಡು ಹೋಬಳಿ ಘಟಕದ ಉಪಾಧ್ಯಕ್ಷ ಗಣೇಶ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದೇವಕಿ ಹಾಜರಿದ್ದರು. ವಿದ್ಯಾಸಂಸ್ಥೆಯ ಶಿಕ್ಷಕಿಯರು ಜನಪದ ಗೀತೆಗಳನ್ನು ಹಾಡಿದ್ದು ಗಮನಾರ್ಹವಾಗಿತ್ತು.

ವಿದ್ಯಾಸಂಸ್ಥೆಯ ಶಿಕ್ಷಕಿ ಸರಳಾ ನಿರೂಪಿಸಿದರು. ಘಟಕದ ಉಪಾಧ್ಯಕ್ಷ ಹೆಚ್.ಬಿ. ಕೃಷ್ಣಪ್ಪ ಸ್ವಾಗತಿಸಿದರೆ, ಶಿಕ್ಷಕಿ ಶ್ರೀಮತಿ ಮಂಗಳ ಪ್ರಾರ್ಥಿಸಿದರು. ಘಟಕದ ಕಾರ್ಯದರ್ಶಿ ಕಿಗ್ಗಾಲು ಜಿ. ಹರೀಶ್ ವಂದಿಸಿದರು.