ಬ್ರಹ್ಮೋಸ್ ಕ್ಷಿಪಣಿಯ ಆಕಸ್ಮಿಕ ಉಡಾವಣೆ: ಮೂವರು ಅಧಿಕಾರಿಗಳ ವಜಾ

ನವದೆಹಲಿ, ಆ. ೨೩: ಮಾರ್ಚ್ ೯ ರಂದು ಬ್ರಹ್ಮೋಸ್ ಕ್ಷಿಪಣಿ ಆಕಸ್ಮಿಕ ಉಡಾವಣೆ ಪ್ರಕರಣದ ಉನ್ನತ ಮಟ್ಟದ ತನಿಖೆ ನಂತರ ಇದೀಗ ಮೂವರು ವಾಯುಪಡೆ ಅಧಿಕಾರಿಗಳನ್ನು ರಕ್ಷಣಾ ಸಚಿವಾಲಯ ವಜಾಗೊಳಿಸಿದೆ. ಬ್ರಹ್ಮೋಸ್ ಕ್ಷಿಪಣಿಯನ್ನು ಆಕಸ್ಮಿಕವಾಗಿ ೨೦೨೨ರ ಮಾರ್ಚ್ ೯ ರಂದು ಉಡಾಯಿಸಲಾಗಿದೆ. ಘಟನೆಯ ಜವಾಬ್ದಾರಿಯನ್ನು ನಿಗದಿಪಡಿಸುವುದು ಸೇರಿದಂತೆ ಪ್ರಕರಣದ ಸತ್ಯಗಳನ್ನು ತಿಳಿಯಲು ಸ್ಥಾಪಿಸಲಾದ ವಿಚಾರಣಾ ನ್ಯಾಯಾಲಯವು ಮೂವರು ಅಧಿಕಾರಿಗಳು ಕ್ಷಿಪಣಿಯನ್ನು ಆಕಸ್ಮಿಕವಾಗಿ ಉಡಾಯಿಸಲು ಕಾರಣರಾದರು ಎಂದು ತಿಳಿಸಿದೆ ಎಂದು ವಾಯುಪಡೆ ತಿಳಿಸಿದೆ. ಮೂವರು ಅಧಿಕಾರಿಗಳನ್ನು ಪ್ರಾಥಮಿಕವಾಗಿ ಘಟನೆಗೆ ಹೊಣೆಗಾರರನ್ನಾಗಿ ಮಾಡಲಾಗಿದೆ. ಅವರ ಸೇವೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ವಜಾಗೊಳಿಸಿದೆ. ೨೩ ಆಗಸ್ಟ್ ೨೨ ರಂದು ಅಧಿಕಾರಿಗಳಿಗೆ ವಜಾಗೊಳಿಸುವ ಆದೇಶಗಳನ್ನು ನೀಡಲಾಗಿದೆ ಎಂದು ಹೇಳಿದೆ. ಮಾರ್ಚ್ನಲ್ಲಿ ಪಾಕಿಸ್ತಾನದ ಪ್ರದೇಶಕ್ಕೆ ಭಾರತದ ಕಡೆಯಿಂದ ಆಕಸ್ಮಿಕವಾಗಿ ಕ್ಷಿಪಣಿಯನ್ನು ಹಾರಿಸಲಾಯಿತು. ಇದನ್ನು ರಕ್ಷಣಾ ಸಚಿವಾಲಯವು ತೀವ್ರ ವಿಷಾದನೀಯ ಎಂದು ಕರೆದಿತ್ತು. ಅಲ್ಲದೆ ತಾಂತ್ರಿಕ ಅಸಮರ್ಪಕವನ್ನು ದೂಷಿಸಿತು. ಪಾಕಿಸ್ತಾನದ ಪ್ರಕಾರ, ಕ್ಷಿಪಣಿಯು ತನ್ನ ವಾಯುಪ್ರದೇಶದೊಳಗೆ ೧೦೦ ಕಿ.ಮೀ.ಗೂ ಹೆಚ್ಚು ದೂರ, ೪೦,೦೦೦ ಅಡಿ ಎತ್ತರದಲ್ಲಿ ಮತ್ತು ಅದು ಲ್ಯಾಂಡ್ ಆಗುವ ಮೊದಲು ಶಬ್ದದ ಮೂರು ಪಟ್ಟು ವೇಗದಲ್ಲಿ ಹಾರಿತು. ಆದರೆ ಕ್ಷಿಪಣಿಯಲ್ಲಿ ಸ್ಫೋಟಿಸಲಿಲ್ಲ ಎಂದು ಹೇಳಿದೆ. ಇಂತಹ ನಿರ್ಲಕ್ಷ್ಯದ ಅಹಿತಕರ ಪರಿಣಾಮಗಳ ಬಗ್ಗೆ ಎಚ್ಚರದಿಂದಿರಿ ಮತ್ತು ಭವಿಷ್ಯದಲ್ಲಿ ಇಂತಹ ಉಲ್ಲಂಘನೆಗಳು ಮರುಕಳಿಸುವುದನ್ನು ತಪ್ಪಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನವು ಭಾರತಕ್ಕೆ ಎಚ್ಚರಿಕೆ ನೀಡಿದೆ.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆ: ತೆಲಂಗಾಣ ಬಿಜೆಪಿ ಶಾಸಕ ಅಮಾನತು

ಹೈದರಾಬಾದ್, ಆ. ೨೩: ಪ್ರವಾದಿ ಮುಹಮ್ಮದ್ ಅವರನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆ ನೀಡಿದ್ದ ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರನ್ನು ಮಂಗಳವಾರ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಪ್ರವಾದಿ ಮುಹಮ್ಮದ್ ಅವರ ಕುರಿತು ವಿವಾದಾತ್ಮಕ ಹೇಳಿಕೆಯ ನಂತರ ರಾಜಾ ಸಿಂಗ್ ಅವರ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಪ್ರತಿಭಟನೆ ಮತ್ತು ಜನರ ಅಸಮಾಧಾನವನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಬಿಜೆಪಿ ಶಾಸಕನ ವಿರುದ್ಧ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಇಂದು ಅವರನ್ನು ಬಂಧಿಸಿದ್ದರು. ಬಂಧನಕ್ಕೊಳಗಾಗಿರುವ ರಾಜಾ ಸಿಂಗ್ ಅವರನ್ನು ಬಿಜೆಪಿ ಪಕ್ಷದಿಂದ ಅಮಾನಗೊಳಿಸಿದೆ. 'ನೀವು (ರಾಜಾ ಸಿಂಗ್) ವಿವಿಧ ವಿಷಯಗಳಲ್ಲಿ ಪಕ್ಷದ ನಿಲುವಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೀರಿ. ಇದು ಭಾರತೀಯ ಜನತಾ ಪಕ್ಷದ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ನಿಮ್ಮನ್ನು ಪಕ್ಷದಿಂದ ಮತ್ತು ನಿಮ್ಮ ಜವಾಬ್ದಾರಿಗಳು/ನಿಯೋಜನೆಗಳು ಯಾವುದಾದರೂ ಇದ್ದರೆ ಅದರಿಂದ ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಕಾರ್ಯದರ್ಶಿ ಓಂ ಪಾಠಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸಿಬಿ ರದ್ದು: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ

ಬೆಂಗಳೂರು, ಆ. ೨೩: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರದ್ದುಗೊಳಿಸಿ, ಅಲ್ಲಿರುವ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿದ್ದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಕನಕರಾಜು ಎನ್ನುವ ವ್ಯಕ್ತಿಯೊಬ್ಬರು ವಕೀಲ ಅಶೋಕ್ ಪಾಣಿಗ್ರಾಹಿ ಅವರ ಮೂಲಕ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಸಿ.ಟಿ. ರವಿಕುಮಾರ್ ಪೀಠದ ಮುಂದೆ ಖಾಸಗಿ ಅರ್ಜಿ ಸಲ್ಲಿಸಿದ್ದಾರೆ. ಶೀಘ್ರವೇ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಪೀಠ ಹೇಳಿದೆ. ಇದಕ್ಕು ಮುನ್ನ ರಾಜ್ಯ ಸರ್ಕಾರವೇ ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ ಎಂದು ವರದಿಯಾಗಿತ್ತು. ಆದರೆ ಈ ವರದಿಯನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, "ಖಾಸಗಿ ಮೇಲ್ಮನವಿ ಅರ್ಜಿ ದಾಖಲಾಗಿದೆ. ಈ ವಿಚಾರದಲ್ಲಿ ಸರ್ಕಾರದ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ಎಸಿಬಿ ರದ್ದು ಮಾಡುವ ನಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದೇವೆ' ಎಂದು ಹೇಳಿದ್ದಾರೆ.

ಶೀಘ್ರದಲ್ಲೇ ರಾಜ್ಯದಲ್ಲಿ ವಿಧಿ ವಿಜ್ಞಾನ ಶಾಸ್ತç ವಿವಿ ಸ್ಥಾಪನೆ: ಆರಗ ಜ್ಞಾನೇಂದ್ರ

ಕೆಜಿಎಫ್, ಆ. ೨೩: ಇಡೀ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ವಿಧಿ ವಿಜ್ಞಾನ ಶಾಸ್ತç ವಿಶ್ವ ವಿದ್ಯಾಲಯ ಸ್ಥಾಪಿಸಲು ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಕೆಜಿಎಫ್‌ನಲ್ಲಿ ರಾಜ್ಯ ಪೊಲೀಸ್ ವಸತಿ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದಿಂದ ನೂತನವಾಗಿ ನಿರ್ಮಿಸಲಾಗಿರುವ ಡಿಎಆರ್ ಆಡಳಿತ ಕಚೇರಿ, ಶಸ್ತಾçಗಾರ ಹಾಗೂ ಶ್ವಾನದಳ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು, ಅನುಮತಿ ಪಡೆದ ನಂತರ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ಪ್ರಾರಂಭಿಸ ಲಾಗುವುದು ಎಂದರು. ಈಗ ಹೈದರಾಬಾದ್‌ನಲ್ಲಿ ಎಫ್‌ಎಸ್‌ಎಲ್ ವಿಶ್ವವಿದ್ಯಾನಿಲಯವಿದ್ದು, ಅದೇ ರೀತಿಯಲ್ಲಿ ಎಲ್ಲಾ ಆಧುನಿಕ ಮತ್ತು ಉನ್ನತೀಕರಿಸಿದ ಸೌಲಭ್ಯಗಳೊಂದಿಗೆ ಇದನ್ನು ಪ್ರಾರಂಭಿಸಲಾಗುವುದು, ಇದರಿಂದ ವಿದ್ಯಾರ್ಥಿ ಸಮುದಾಯಕ್ಕೆ ವರದಾನವಾಗಲಿದೆ ಎಂದು ಜ್ಞಾನೇಂದ್ರ ಹೇಳಿದರು. ಹಣಕ್ಕಾಗಿ ಕೆಲವು ಅಧಿಕಾರಿಗಳು ಇತರ ರಾಷ್ಟçದ ಜನರಿಗೆ ಆಧಾರ್ ಕಾರ್ಡ್ ನೀಡುತ್ತಿರುವುದು ಅಪರಾಧಕ್ಕೆ ಕಾರಣವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಅಂತಹ ಅಧಿಕಾರಿಗಳು ಕ್ರಮ ಎದುರಿಸಬೇಕಾಗುತ್ತದೆ ಎಂದು ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ ಮತ್ತು ಅಪರಾಧಗಳನ್ನು ತಕ್ಷಣವೇ ಕಂಡುಹಿಡಿಯುವಲ್ಲಿ ರಾಜ್ಯ ಪೊಲೀಸರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಮೆಕ್ಸಿಕೋದಲ್ಲಿ ಮತ್ತೊಬ್ಬ ಪತ್ರಕರ್ತನ ಹತ್ಯೆ

ಮೆಕ್ಸಿಕೋ ಸಿಟಿ, ಆ. ೨೩: ಮೆಕ್ಸಿಕೋದಲ್ಲಿ ಪತ್ರಕರ್ತರ ಸರಣಿ ಹತ್ಯೆ ಮುಂದುವರೆದಿದ್ದು, ಆನ್‌ಲೈನ್ ಸ್ಥಳೀಯ ಸುದ್ದಿ ಕಾರ್ಯಕ್ರಮ ನಡೆಸುತ್ತಿದ್ದ ಪತ್ರಕರ್ತನನ್ನು ದಕ್ಷಿಣ ಮೆಕ್ಸಿಕೋದಲ್ಲಿ ಗುಂಡಿಕ್ಕಿ ಕೊಂದಿದ್ದು, ಇದರೊಂದಿಗೆ ಈ ವರ್ಷ ದೇಶವ್ಯಾಪಿ ಹತ್ಯೆಯಾದ ಪತ್ರಕರ್ತರ ಸಂಖ್ಯೆ ೧೫ಕ್ಕೆ ಏರಿಕೆಯಾಗಿದೆ. ಪತ್ರಕರ್ತ ಫ್ರೆಡಿಡ್ ರೋಮನ್ ಅವರನ್ನು ರಾಜ್ಯದ ರಾಜಧಾನಿ ಚಿಲ್ಪಾನ್‌ಸಿಂಗೊದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ದಕ್ಷಿಣ ರಾಜ್ಯವಾದ ಗೆರೆರೊದಲ್ಲಿ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ. ರೋಮನ್ ಅವರ ಕಾರ್ಯಕ್ರಮ "ದಿ ರಿಯಾಲಿಟಿ ಆಫ್ ಗೆರೆರೋ" ರಾಜ್ಯ ಮಟ್ಟದ ರಾಜಕೀಯದ ಮೇಲೆ ಹೆಚ್ಚು ಕೇಂದ್ರೀಕೃತವಾಗಿತ್ತು ಮತ್ತು ಅವರು ಅಂಕಣವನ್ನೂ ಬರೆದಿದ್ದಾರೆ. ಮೆಕ್ಸಿಕೋ ಪತ್ರಕರ್ತರಿಗೆ ೨೦೨೨ ಅತ್ಯಂತ ಮಾರಕವಾಗಿದ್ದು, ಇದುವರೆಗೆ ೧೫ ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ. ಹೀಗಾಗಿ ವರದಿಗಾರರಿಗೆ ಅತ್ಯಂತ ಅಪಾಯಕಾರಿ ದೇಶವೆಂದು ಪರಿಗಣಿಸಲಾಗಿದೆ.