ಭಾಗಮಂಡಲ, ಆ. ೨೩: ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ಕುಂಬೇರ ಭೀಮಯ್ಯ ಅವರು ಕಳೆದ ೩೦ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ, ಲೆಫ್ಟಿನೆಂಟ್ ಹಾನರರಿ ಆಗಿ ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಜನವರಿ ೨೬ ಮತ್ತು ಆಗಸ್ಟ್ ೧೫ರಂದು ಸೇನೆಯಲ್ಲಿ ಮುಂಬಡ್ತಿ ಪಡೆದವರಿಗೆ ವಿವಿಧ ರ‍್ಯಾಂಕ್ ನೀಡಲಾಗುತ್ತದೆ. ಸೇನೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಭೀಮಯ್ಯನವರಿಗೆ ನಿವೃತ್ತಿಯ ಬಳಿಕ ಸೇನೆಯು ಕ್ಯಾಪ್ಟನ್ ಪದವಿ ನೀಡಿ ಗೌರವಿಸಲಾಗಿದೆ.

ಸೇನೆ ನೀಡಿದ ಕ್ಯಾಪ್ಟನ್ ಪದವಿಯ ನಕ್ಷತ್ರವನ್ನು ಸ್ವಾತಂತ್ರ‍್ಯೋತ್ಸವದ ೭೫ರ ಸಂಭ್ರಮದಲ್ಲಿ ತಾಯಿ ಶಾರದಾ ಅವರು ಮಗನ ಭುಜಕ್ಕೆ ಹಾಕುವುದರ ಮೂಲಕ ಸ್ವಾತಂತ್ರ‍್ಯೋತ್ಸವವನ್ನು ಸಂಭ್ರಮಿಸಿದರು. ಬಳಿಕ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ ಕಾರ್ಯಕ್ರಮ ಆಚರಿಸಲಾಯಿತು. ಈ ಸಂದರ್ಭ ನಿವೃತ್ತ ಸೈನಿಕರಾದ ಕೋಪಟ್ಟಿಯ ಪಿಡಿಓ ಅಶೋಕ್ ಮತ್ತು ಕುಟುಂಬಸ್ಥರು ಹಾಜರಿದ್ದರು.