ಸಿದ್ದಾಪುರ, ಆ. ೨೧: ಭಾರತ ಕಮ್ಯುನಿಸ್ಟ್ ಪಕ್ಷದ ವೀರಾಜಪೇಟೆ ತಾಲೂಕು ಮೊದಲ ಸಮ್ಮೇಳನ ಸಿದ್ದಾಪುರದ ಎಐಟಿಯುಸಿ ಕಚೇರಿಯಲ್ಲಿ ನಡೆಯಿತು. ಸಮ್ಮೇಳನದಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನಿಲ್ ಧ್ವಜಾರೋಹಣ ನೆರವೇರಿಸಿದರು.

ಇದೇ ಸಂದರ್ಭ ವೀರಾಜಪೇಟೆ ತಾಲೂಕು ಸಮಿತಿಯನ್ನು ರಚನೆ ಮಾಡಲಾಯಿತು. ವೀರಾಜಪೇಟೆ ತಾಲೂಕು ಕಾರ್ಯದರ್ಶಿಯಾಗಿ ಎಂ.ಎ. ಕೃಷ್ಣ, ಸಹಕಾರ್ಯದರ್ಶಿಯಾಗಿ ಎಲಿಜಬೆತ್ ಹಾಗೂ ಸೀತಾರಾಮ್, ಖಜಾಂಜಿಯಾಗಿ ಎನ್. ಮಣಿ ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರಾಗಿ ಹೊಸಳ್ಳಿ ಜಯಕುಮಾರ್, ಭೋಜ ಬಾರಿಕಾಡು, ರಘು, ಸಿ.ಕೆ. ಪ್ರಕಾಶ್, ಸೆಲ್ವಂ, ಆಂತೋನಿ, ಕುಮಾರ, ರಮೇಶ್ ಇವರುಗಳನ್ನು ಆಯ್ಕೆ ಮಾಡಲಾಯಿತು.

೪ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತು. ನದಿ ತೀರದ ಸಂತ್ರಸ್ತರು ಹಾಗೂ ತೋಟದ ಲೈನ್ ಮನೆಗಳಲ್ಲಿ ವಾಸಿಸುವ ಬಡವರಿಗೆ ನಿವೇಶನ ಹಾಗೂ ಮನೆಯನ್ನು ಕಟ್ಟಿ ಕೊಡಬೇಕು. ವೀರಾಜಪೇಟೆ ತಾಲೂಕು ಕಚೇರಿ ಹಾಗೂ ಉಪನೋಂದಣಿ ಕಚೇರಿಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಹೋರಾಟ ರೂಪಿಸಬೇಕು. ತೋಟ ಕಾರ್ಮಿಕರಿಗೆ ಕನಿಷ್ಟ ವೇತನ ೬೦೦ ರೂ. ಕೊಡಿಸಬೇಕು ಹಾಗೂ ಕಾಡಾನೆ ಹಾವಳಿ ಹಾಗೂ ವನ್ಯಜೀವಿಗಳ ಉಪಟಳದಿಂದ ರೈತರ, ಕಾರ್ಮಿಕರ ಜೀವ ಹಾನಿಯನ್ನು ತಪ್ಪಿಸಲು ಶಾಶ್ವತ ಕಾರ್ಯಕ್ರಮ ರೂಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.