ಕುಶಾಲನಗರ, ಆ. ೨೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಒಕ್ಕೂಟ ಪದಾಧಿಕಾರಿಗಳ ಬಲವರ್ಧನೆಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕುಶಾಲನಗರ ಸಮೀಪ ಮುಳ್ಳುಸೋಗೆ ಸಮುದಾಯ ಭವನದಲ್ಲಿ ನಡೆದ ತರಬೇತಿ ಕಾರ್ಯಾಗಾರವನ್ನು ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಅವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಮತ್ತು ಸರ್ಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳ ಬಗ್ಗೆ ಗ್ರಾಮೀಣ ಜನತೆಗೆ ತಲುಪಿಸುವ ಬಗ್ಗೆ ಅರಿವು ಜಾಗೃತಿ ಮೂಡಿಸುವುದು ಒಕ್ಕೂಟದ ಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮತ್ತು ಕುಶಾಲನಗರ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಸುರಯ್ಯಭಾನು, ವೇದಿಕೆಯ ಯೋಜನಾಧಿಕಾರಿ ರೋಹಿತ್ ಮಾತನಾಡಿದರು. ಈ ಸಂದರ್ಭ ಶಿಬಿರದಲ್ಲಿ ಕ್ಷೇತ್ರದಿಂದ ನಡೆಯುತ್ತಿರುವ ವಿವಿಧ ಸಂಸ್ಥೆಗಳ ಪರಿಚಯ ಮತ್ತು ಯೋಜನೆಗಳ ವಿವರ ಒದಗಿಸಲಾಯಿತು. ನಾಯಕನ ಗುಣಲಕ್ಷಣಗಳು, ನಾಯಕತ್ವದ ಗುಣಗಳು, ಒಕ್ಕೂಟದ ಉದ್ದೇಶ, ಪದಾಧಿಕಾರಿಗಳ ಜವಾಬ್ದಾರಿ, ಕರ್ತವ್ಯ, ಕ್ರಿಯಾಯೋಜನೆಗಳು, ದಾಖಲಾತಿ ನಿರ್ವಹಣೆ ಮತ್ತಿತರರ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು. ಸದಸ್ಯರಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ನಿರ್ದೇಶಕಿ ಲೀಲಾವತಿ, ಸುಂಟಿಕೊಪ್ಪ ಮೇಲ್ವಿಚಾರಕರಾದ ಪುಷ್ಪಲತಾ, ಯೋಜನಾಧಿಕಾರಿ ರೋಹಿತ್ ಪಾಲ್ಗೊಂಡಿದ್ದರು. ಕುಶಾಲನಗರ ಮೇಲ್ವೀಚಾರಕರಾದ ಪೂರ್ಣಿಮ, ಒಕ್ಕೂಟದ ಪ್ರತಿನಿಧಿ ರಾಧ ಮತ್ತಿತರರು ಇದ್ದರು.