ಮಡಿಕೇರಿ, ಆ. ೨೧: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ನೂತನ ಸದಸ್ಯತ್ವ ಆಂದೋಲನಕ್ಕೆ ತಾ. ೨೩ರಂದು ಸಂಜೆ ೪ ಗಂಟೆಗೆ ಮಡಿಕೇರಿಯ ಪತ್ರಿಕಾ ಭವನದ ಸಭಾಂಗಣದಲ್ಲಿ ಚಾಲನೆ ನೀಡಲಾಗುವುದು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ ಅವರು ಸದಸ್ಯತ್ವ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಡಿಕೇರಿ ನಗರಸಭಾ ಅಧ್ಯಕ್ಷೆ ಎಂ.ಪಿ.ಅನಿತಾ ಪೂವಯ್ಯ, ಕಸಾಪ ಜಿಲ್ಲಾ ಕಾರ್ಯದರ್ಶಿಗಳಾದ ಎಸ್.ಐ.ಮುನೀರ್ ಅಹಮದ್, ರೇವತಿ ರಮೇಶ್ ಭಾಗವಹಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಸದುದ್ದೇಶದಿಂದ ಒಂದು ಕೋಟಿ ಅಜೀವ ಸದಸ್ಯತ್ವವನ್ನು ನೋಂದಾಯಿಸುವ ಗುರಿಯನ್ನು ಕೇಂದ್ರದ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹೊಂದಿದ್ದಾರೆ.

ಇದೇ ಕಾರಣಕ್ಜಾಗಿ ಅಜೀವ ಸದಸ್ಯತ್ವ ಶುಲ್ಕವನ್ನು ೧೦೦೦ರೂ. ಗಳಿಂದ ೨೫೦ ರೂ.ಗಳಿಗೆ ಇಳಿಸಲಾಗಿದೆ. ಸದಸ್ಯರಿಗೆ ಜೀವಮಾನವಿಡೀ ಬಳಕೆಗೆ ಬರುವ ಸ್ಮಾರ್ಟ್ ಕಾರ್ಡ್ ರೂ ೧೫೦ರ ಬೆಲೆಯಲ್ಲಿ ನೀಡಲಾಗುವುದು. ಸದಸ್ಯರಾಗಲು ವಿಶೇಷವಾಗಿ ರೂಪಿಸಲಾಗಿರುವ ಈ ಆ್ಯಪ್ ಅನ್ನು ಬಳಸಿ ಇರುವ ಸ್ಥಳದಿಂದಲೇ ಸದಸ್ಯರಾಗುವ ಅವಕಾಶವನ್ನು ಕಲ್ಪಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಈಗ ೨೪೧೪ ಸದಸ್ಯರಿದ್ದಾರೆ. ಪರಿಷತ್ತನ್ನು ಸದೃಡಗೊಳಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ೫೦ ಸಾವಿರ ಕನ್ನಡಿಗರನ್ನು ಸದಸ್ಯರನ್ನಾಗಿಸಲು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗುರಿ ಹೊಂದಿದೆ. ಜಿಲ್ಲೆಯ ಕನ್ನಡಿಗರು ಸದಸ್ಯತ್ವ ಪಡೆಯುವ ಮೂಲಕ ಪರಿಷತ್ತನ್ನು ಬಲಗೊಳಿಸಬೇಕು ಎಂದು ಅಧ್ಯಕ್ಷ ಕೇಶವ ಕಾಮತ್ ಕೋರಿದ್ದಾರೆ.