ಮಡಿಕೇರಿ, ಆ. ೨೧: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕ.ರಾ.ವಿ.ಪ.) ವತಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಬೆಳಗಾವಿ ನಗರದಲ್ಲಿ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಸರ್ ಸಿ.ವಿ. ರಾಮನ್ ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ಕೂಡಿಗೆ ಸೈನಿಕ ಶಾಲೆಯ ವಿದ್ಯಾರ್ಥಿಗಳಾದ ಲಕ್ಷಕುಮಾರ್ ಸಿಂಗ್ ಹಾಗೂ ಜನಿತ್ ತಿವಾರಿ ಆಯ್ಕೆಯಾಗಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕ.ರಾ.ವಿ.ಪ.) ವತಿಯಿಂದ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ.ರಾ.ವಿ.ಪ. ಕೊಡಗು ಜಿಲ್ಲಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿ ಶನಿವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸರ್ ಸಿ.ವಿ. ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೂಡಿಗೆ ಸೈನಿಕ ಶಾಲೆಯ ಮಾರ್ಗದರ್ಶಿ ಶಿಕ್ಷಕ ದಾದಾ ಡಿ. ಕುಶ್ನಾಳೆ ನೇತೃತ್ವದ ಈ ತಂಡವು ಮೌಖಿಕ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಗೊಂಡಿದೆ.
ಗೋಣಿಕೊಪ್ಪ ಬಳಿಯ ಕಳತ್ಮಾಡು ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ವಿಪುಲ್ ಪೊನ್ನಪ್ಪ ಮತ್ತು ವೇದಾಂತ್ ಬೆಳ್ಯಪ್ಪ ತಂಡವು ಮಾರ್ಗದರ್ಶಿ ಶಿಕ್ಷಕಿ ಅನಿತಾ ಉಪ್ಪಿನ್ ನೇತೃತ್ವದಲ್ಲಿ ದ್ವಿತೀಯ ಸ್ಥಾನ ಪಡೆಯಿತು.
ಸೋಮವಾರಪೇಟೆ ಸಂತ ಜೋಸೆಫರ ಪ್ರೌಢಶಾಲೆಯ ಎಂ.ಎನ್.ಚAದನ್ ಮತ್ತು ಸೊಮಾನ್ಸ್ ವೈ. ನೀಲ್ ತಂಡವು ಮಾರ್ಗದರ್ಶಿ ಶಿಕ್ಷಕ ಹ್ಯೂಬರ್ಟ್ ಡಯಾಸ್ ನೇತೃತ್ವದಲ್ಲಿ ತೃತೀಯ ಸ್ಥಾನ ಪಡೆದರೆ, ಗೋಣಿಕೊಪ್ಪ ಕಾಲ್ಸ್ ಶಾಲೆಯ ಶಾಶ್ವತ್ ಕುಶಾಲಪ್ಪ ಮತ್ತು ಸಿ.ಕೆ. ಉತ್ತಪ್ಪ ತಂಡವು ಮಾರ್ಗದರ್ಶಿ ಶಿಕ್ಷಕರಾದ ಎಂ.ಜೆ. ಬಿಜು ನೇತೃತ್ವದಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿಜೇತಗೊಂಡ ತಂಡಗಳಿಗೆ ಕ್ರಮವಾಗಿ ರೂ.೩ ಸಾವಿರ ರೂ.೨ ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿಮ್ಯಾಥ್ಯೂ ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯ ನೋಡಲ್ ಅಧಿಕಾರಿ ಕೆ.ಜಿ. ನೀಲಕಂಠಪ್ಪ, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಡಿ. ಕೃಷ್ಣಚೈತನ್ಯ, ಕೋಶಾಧಿಕಾರಿ ಜಿ. ಶ್ರೀಹರ್ಷ, ಸಮಿತಿಯ ಮಾಜಿ ಉಪಾಧ್ಯಕ್ಷೆ ಡಿ.ಎಂ. ರೇವತಿ, ಬಿಆರ್ಸಿ ಪಿ.P.ೆ ನಳಿನಿ, ವಿಜ್ಞಾನ ಶಿಕ್ಷಕರಾದ ಹ್ಯೂಬರ್ಟ್ ಡಯಾಸ್, ಬಿ.ಬಿ. ದಿನೇಶ್, ಎನ್.ಎಸ್. ಚಂದ್ರಕಲಾ ಇದ್ದರು.
ಕ್ವಿಜ್ ಮಾಸ್ಟರ್ ಸಿ.ಎಸ್. ಸುರೇಶ್ ಹಾಗೂ ಶಿಕ್ಷಕಿ ಎನ್.ಎಸ್. ಚಂದ್ರಕಲಾ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಿದ ನಂತರ ಮೊದಲ ನಾಲ್ಕು ಸ್ಥಾನ ಗಳಿಸಿದ ತಂಡಗಳಿಗೆ ಆರು ಸುತ್ತಿನಲ್ಲಿ ಮೌಖಿಕ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ ೫೨ ತಂಡಗಳು ಭಾಗವಹಿಸಿದ್ದವು.