ಮಡಿಕೇರಿ, ಆ.೨೧: ಜನೋಪಯೋಗಿ ಕಲ್ಯಾಣ ಕಾರ್ಯಕ್ರಮಗಳ ಮೂಲಕವೇ ಸುದೀರ್ಘ ಕಾಲ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜು ಅರಸು ಹಾಗೂ ಅವರ ಆಡಳಿತವನ್ನು ಇಂದಿಗೂ ರಾಜ್ಯ ಸ್ಮರಿಸಿಕೊಳ್ಳುತ್ತಿದೆ. ಆದರೆ ಇಂದಿನ ವ್ಯವಸ್ಥೆಗಳನ್ನು ಗಮನಿಸಿದರೆ ನಾವುಗಳು ನೈತಿಕ ಅಧ:ಪತನದಲ್ಲಿದ್ದೇವೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ನೀಲಗಿರಿ ತಳವಾರ ವಿಷಾದ ವ್ಯಕ್ತಪಡಿಸಿದರು.
ಡಿ.ದೇವರಾಜ ಅರಸು ಅವರ ೧೦೭ನೇ ಜನ್ಮದಿನಾಚರಣೆ ಮತ್ತು ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಸಮಾನತೆಗೆ ಕಾರಣವಾದ ಹಾವನೂರು ಅವರ ವರದಿ ಜಾರಿಗೊಂಡು ೫೦ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಹಮತ ವೇದಿಕೆ ಹಾಗೂ ಅಹಿಂದ ಒಕ್ಕೂಟದಿಂದ ಇಬ್ಬರು ಮಹಾನ್ ಚೇತನಗಳನ್ನು ಸ್ಮರಿಸಿಕೊಳ್ಳುವ ಕಾರ್ಯಕ್ರಮ ನಗರದ ಪತ್ರಿಕಾ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಳವಾರ, ಜನಕಲ್ಯಾಣ ಕಾರ್ಯಕ್ರಮಗಳನ್ನು ಅತ್ಯಂತ ಬುದ್ಧಿವಂತಿಕೆಯಿAದ ಬಳಸಿಕೊಂಡು ಸಾಮಾಜಿಕ ಸುಧಾರಣೆಯ ಮೂಲಕ ಅಧಿಕಾರ ನಡೆಸಿದ ಕಾರಣಕ್ಕಾಗಿ ಅರಸು ಅವರನ್ನು ರಾಜ್ಯದ ಜನರು ಇಂದಿಗೂ ನೆನಪಿನಲ್ಲಿ ಉಳಿಸಿಕೊಂಡಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರಾಜ್ಯ ಉಚ್ಚ ನ್ಯಾಯಾಲಯದ ವಕೀಲ ಎ.ಎಸ್.ಪೊನ್ನಣ್ಣ ಸಾಮಾಜಿಕ ಮತ್ತು ಶೈಕ್ಷಣಿಕ ಮೀಸಲಾತಿ ಪದ್ಧತಿಯನ್ನು ನ್ಯಾಯಾಲಯವೇ ಒಪ್ಪಿಕೊಂಡಿದೆ. ಆದರೆ ಇದರ ಸಮರ್ಪಕ ಅನುಷ್ಠಾನಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದುರಾಗಿದೆ. ಇಲ್ಲಿಯವರೆಗೆ ರಾಜ್ಯವನ್ನಾಳಿದ ಯಾವುದೇ ಸರ್ಕಾರ ಮೀಸಲಾತಿ ಜಾರಿಗೆ ನೈಜ ಕಾಳಜಿ ತೋರಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸಾಹಿತಿ ಹಾಗೂ ಉಪನ್ಯಾಸಕÀ ಡಾ.ಮೋಹನ್ ಪಾಳೇಗಾರ್ ಮಾತನಾಡಿ ಡಿ.ದೇವರಾಜ ಅರಸು ಅವರ ಆದರ್ಶಗಳನ್ನು ಎಲ್ಲರೂ ಪಕ್ಷಾತೀತವಾಗಿ ಸ್ಮರಿಸಿಕೊಳ್ಳುತ್ತಾರೆ. ಆದರೆ ಇಂದು ಪ್ರತಿಯೊಂದನ್ನೂ ರಾಜಕೀಯವಾಗಿ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಮತ ವೇದಿಕೆಯ ಅಧ್ಯಕ್ಷ ಟಿ.ಪಿ.ರಮೇಶ್ ಧೀಮಂತ ರಾಜಕಾರಣಿ, ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ಮಹಾನ್ ಚೇತನ ದೇವರಾಜ ಅರಸು ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ತಿಳಿಸಿದರು. ಅಹಿಂದ ಒಕ್ಕೂಟದ ಅಧ್ಯಕ್ಷ ಟಿ.ಎಂ.ಮುದ್ದಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ
ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ರೆಹನಾ ಸುಲ್ತಾನ (ಸ್ತಿçÃಶಕ್ತಿ ಸಂಘಟನೆ), ಬಿ.ಆರ್.ಶರವಣ (ಸಹಕಾರ ಕ್ಷೇತ್ರ) ಹಾಗೂ ಬಿ.ಎನ್.ರಂಗಪ್ಪ (ದುರ್ಬಲ ವರ್ಗಗಳ ಸಂಘಟನಾ ಕ್ಷೇತ್ರ) ಅವರನ್ನು ಸನ್ಮಾನಿಸಲಾಯಿತು. ಎಂ.ಎA.ನAದಕುಮಾರ್ (ಮುಖ್ಯಮಂತ್ರಿಗಳ ಪೊಲೀಸ್ ಪದಕ ವಿಜೇತ ಸಬ್ ಇನ್ಸ್ಪೆಕ್ಟರ್) ಅವರ ಗೈರು ಹಾಜರಿಯಲ್ಲಿ ತಾಯಿ ಸನ್ಮಾನ ಸ್ವೀಕರಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ಸರ್ವೋದಯ ಸಮಿತಿಯ ಜಿಲ್ಲಾಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಅಹಿಂದ ಒಕ್ಕೂಟದ ಕಾರ್ಯದರ್ಶಿ ಮುನೀರ್ ಅಹಮ್ಮದ್ ನಿರೂಪಿಸಿ ವಂದಿಸಿದರು. ಸಹ ಕಾರ್ಯದರ್ಶಿ ಎಂ.ಎA.ಲಿಯಾಕತ್ ಆಲಿ ಪ್ರಾರ್ಥಿಸಿದರು.