(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಆ. ೧೯: ಸರ್ಕಾರಿ, ಅರೆಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಕೆಲಸಕ್ಕೆ ತೆರಳುವ ಮಹಿಳೆಯರ ಪುಟಾಣಿ ಮಕ್ಕಳನ್ನು ಪಾಲನೆ ಮಾಡುವ ಸಲುವಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಸಂಸ್ಥೆಯ ಪಾಲನ ಕೇಂದ್ರದಲ್ಲಿ ಬಿಟ್ಟು ತೆರಳುತ್ತಿದ್ದರು. ಇದರಿಂದ ಮಹಿಳೆಯರು ದುಡಿಯುವ ವೇತನದಲ್ಲಿ ಬಹುಪಾಲನ್ನು ಮಕ್ಕಳ ಪಾಲನೆ ಮಾಡುವ ಕೇಂದ್ರಕ್ಕೆ ನೀಡಬೇಕಾಗಿತ್ತು. ಅಲ್ಲದೆ ಸಂಜೆಯ ವೇಳೆಯಲ್ಲಿ ಕರ್ತವ್ಯ ಮುಗಿಸಿ ಆತುರಾತೂರದಲ್ಲಿ ತಮ್ಮ ಮಕ್ಕಳ ಪಾಲನೆ ಕೇಂದ್ರಕ್ಕೆ ತೆರಳಿ ಮಕ್ಕಳನ್ನು ಕರೆದೊಯ್ಯಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಸಾಕಷ್ಟು ಮಹಿಳೆಯರು ಕಷ್ಟ ಅನುಭವಿಸುತ್ತಿದ್ದರು. ಇತ್ತ ಕರ್ತವ್ಯಕ್ಕೆ ತೆರಳದಿದ್ದರೆ ದೈನಂದಿನ ಬದುಕಿಗೆ ಸಂಕಷ್ಟ ಎದುರಾಗುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಜಿಲ್ಲೆಗೆ ಒಂದು ಎರಡು ತಾಲೂಕುಗಳಿಗೆ ಒಂದು ಶಿಶುಪಾಲನಾ ಕೇಂದ್ರವನ್ನು ತೆರೆಯುವ ಮೂಲಕ ಉದ್ಯೋಗಸ್ಥ ಮಹಿಳೆಯರ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಕೈಗೆತ್ತಿಕೊಂಡಿದೆ.

೨೦೨೨-೨೩ನೇ ಸಾಲಿನ ಆಯಾವ್ಯಯದಲ್ಲಿ ಅತೀ ಹೆಚ್ಚು ಮಹಿಳಾ ಕಾರ್ಮಿಕರು ಇರುವ ಪ್ರದೇಶಗಳಲ್ಲಿ ಶಿಶುಪಾಲನ ಕೇಂದ್ರಗಳನ್ನು ತೆರೆಯಲು ಘೋಷಣೆ ಮಾಡಿತ್ತು. ಇದರಿಂದ ಮಕ್ಕಳ ಪೋಷಣೆ, ಆರೈಕೆ ಹಾಗೂ ಸುರಕ್ಷತೆ ದೃಷ್ಟಿಯಿಂದ ದುಡಿಯುವ ಮಹಿಳೆಯರಿಗೆ ಶಿಶುಪಾಲನ ಕೇಂದ್ರವು ಅಗತ್ಯವಿರುವುದನ್ನು ಮನಗಂಡು ಇಲಾಖೆ ವತಿಯಿಂದಲೇ ಇದರ ನಿರ್ವಹಣೆ ಉಸ್ತುವಾರಿ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಇದರ ಜವಾಬ್ದಾರಿಯನ್ನು ಸ್ತಿçà ಶಕ್ತಿ ಗುಂಪುಗಳಿಗೆ ಇದರ ಜವಾಬ್ದಾರಿ ನೀಡಿದೆ. ೬ ತಿಂಗಳಿನಿAದ ೬ ವರ್ಷದ ಒಳಗಿನ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಹಾಗೂ ಸುರಕ್ಷತೆ ಒದಗಿಸುವುದು ಮಕ್ಕಳ ಪೋಷಣೆ ಹಾಗೂ ಆರೋಗ್ಯ ಸ್ಥಿತಿ ಸುಧಾರಿಸುವುದು, ಮಕ್ಕಳ ದೈಹಿಕ ಅರಿವಿನ ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.

ಶಿಶುಪಾಲನ ಕೇಂದ್ರದಲ್ಲಿ ಮುಂಜಾನೆ ೯.೩೦ ರಿಂದ ಸಂಜೆ ೬ ಗಂಟೆಯ ವರೆಗೆ ಸಮಯ ನಿಗದಿಪಡಿಸಿ ಮಕ್ಕಳ ಭದ್ರತೆ ದೃಷ್ಟಿಯಿಂದ ನೆಲ ಮಹಡಿಯಲ್ಲಿ ಶಿಶುಪಾಲನ ಕೇಂದ್ರ ಕಾರ್ಯ ನಿರ್ವಹಿಸುವುದು, ಉತ್ತಮ ಗಾಳಿ, ಬೆಳಕು ಮತ್ತು ಶೌಚಾಲಯ ವ್ಯವಸ್ಥೆ ಇರುವ ಜಾಗದಲ್ಲಿ ಕೇಂದ್ರ ತೆರೆಯುವುದು, ಪಾಲನ ಕೇಂದ್ರದಲ್ಲಿ ಮಕ್ಕಳ ಆಟ, ಕಲಿಕೆ, ಪ್ರತ್ಯೇಕ ಅಡುಗೆ ಕೋಣೆ, ಸುರಕ್ಷಿತ ನೀರಿನ ವ್ಯವಸ್ಥೆ, ಮಕ್ಕಳಿಗೆ ಅಗತ್ಯವಿರುವ ತೊಟ್ಟಿಲು, ಹಾಸಿಗೆ, ಹೊದಿಕೆಗಳು, ಮಕ್ಕಳ ಆಟಿಕೆಗಳು, ಗೋಡೆಯ ಮೇಲೆ ಮಕ್ಕಳಿಗೆ ಉಪಯುಕ್ತವಾದ ಕಲಿಕಾ ಸಾಮಗ್ರಿಗಳು, ಚಿತ್ರಪಟಗಳು, ಫ್ಯಾನ್‌ನ ವ್ಯವಸ್ಥೆ, ವಿಶೇಷಚೇತನ ಮಕ್ಕಳಿಗೆ ರಾಂಪ್ಸ್, ಆರೋಗ್ಯ ರಕ್ಷಣೆಗಾಗಿ ಔಷಧಿಗಳ ಕಿಟ್, ಎರಡು ತಿಂಗಳಿಗೊಮ್ಮೆ ವೈದ್ಯಾಧಿಕಾರಿಗಳಿಂದ ಆರೋಗ್ಯ ತಪಾಸಣೆ, ಕೇಂದ್ರದಲ್ಲಿ ಮಹಿಳೆಯರ ವಿಶ್ರಾಂತಿಗೆ ಹಾಗೂ ಹಾಲುಣಿಸುವ ತಾಯಿಯಂದಿರಿಗೆ ಅವಕಾಶವನ್ನು ಇಲಾಖೆಯು ಕಲ್ಪಿಸಿದೆ. ಪ್ರತಿ ಕೇಂದ್ರದಲ್ಲಿ ಗರಿಷ್ಠ ೨೫ ಮಕ್ಕಳನ್ನು ಹೊಂದಿರಬಹುದಾಗಿದ್ದು ತಿಂಗಳ ೨೬ ದಿನಗಳು ಪ್ರತಿ ದಿನ ೬ ರಿಂದ ೮ ಗಂಟೆಯವರೆಗೆ ಕರ್ತವ್ಯ ನಿರ್ವಹಿಸಬೇಕು. ಶಿಶುಪಾಲನ ಕೇಂದ್ರಗಳ ನಿರ್ವಹಣೆಯನ್ನು ಆದ್ಯತೆ ಮೇರೆಗೆ ತಾಲೂಕು ಸ್ತಿçà ಶಕ್ತಿ ಒಕ್ಕೂಟಗಳಿಗೆ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ.

ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿಗಳು, ಕಾನೂನು ಸೇವಾ ಪ್ರಾಧಿಕಾರ, ಸ್ಥಳೀಯ ಸೇವಾ ಸಂಸ್ಥೆ, ಶಿಶು ಪಾಲನ ಕೇಂದ್ರದ ಓರ್ವ ಪೋಷಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕರು ಈ ಸಮಿತಿಯ ಕಾರ್ಯ ನಿರ್ವಹಣೆ ಹಾಗೂ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಶಿಶು ಪಾಲನ ಕೇಂದ್ರದಲ್ಲಿ ಶಿಕ್ಷಕಿ ವೃತ್ತಿಗೆ ತರಬೇತಿ ಹೊಂದಿದವರಿಗೆ ಆದ್ಯತೆ ನೀಡಲಾಗಿದೆ. ಸಿಬ್ಬಂದಿಗಳ ವಯೋಮಿತಿಯು ೨೦ ರಿಂದ ೪೦ ನಿಗದಿಪಡಿಸಿದೆ. ಕೇಂದ್ರದಲ್ಲಿ ಮಕ್ಕಳನ್ನು ಆರೈಕೆ ಮಾಡುವ ಸಹಾಯಕಿಯರು ಕನಿಷ್ಟ ೧೦ನೇ ತರಗತಿ ಉತ್ತೀರ್ಣರಾಗಿದ್ದು ಶಿಶುಪಾಲ ಕೇಂದ್ರದ ಸಂಪೂರ್ಣ ಜವಾಬ್ದಾರಿ ನಿರ್ವಹಿಸುವ ಮಹಿಳೆಯು ಪದವಿ ಹೊಂದಿರಬೇಕು. ಸೇರಿದಂತೆ ಹಲವು ನಿಯಮಾವಳಿಗಳನ್ನು ರೂಪಿಸಿ ಸರ್ಕಾರ ಆದೇಶಿಸಿದೆ. ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕಿಗೆ ಮಾಹೆಯಾನ ೧೦ ಸಾವಿರ, ೨ ಸಹಾಯಕಿಗೆ ತಲಾ ೬ ಸಾವಿರ, ವೈದ್ಯಾಧಿಕಾರಿಗಳ ಭೇಟಿಗೆ ೧ ಸಾವಿರ, ಕೇಂದ್ರದ ಬಾಡಿಗೆಗೆ ೫ ಸಾವಿರ ಪಾವತಿಸಲು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಇತರ ವೆಚ್ಚಗಳು ಸೇರಿದಂತೆ ವಾರ್ಷಿಕವಾಗಿ ಒಂದು ಶಿಶು ಪಾಲನ ಕೇಂದ್ರದ ನಿರ್ವಹಣೆಗೆ ಸರ್ಕಾರ ೫,೬೭,೦೦೦ ನಿಗದಿಪಡಿಸಿದೆ. ಶಿಶು ಪಾಲನ ಕೇಂದ್ರದ ನಿರ್ವಹಣೆ ವೆಚ್ಚಕ್ಕಾಗಿ ಮಕ್ಕಳನ್ನು ಬಿಡುವ ಪೋಷಕರು ಮಾಹೆಯಾನ ೨೦೦ ನೀಡಬೇಕಾಗಿದೆ.