ವೀರಾಜಪೇಟೆ, ಆ. ೧೯: ಸಮಾಜದಲ್ಲಿ ಬದುಕು ಕಟ್ಟಿಕೊಂಡ ಪ್ರತಿಯೊಬ್ಬ ಮನುಷ್ಯನಿಗೂ ರಕ್ತದ ಅಗತ್ಯವಿರುತ್ತದೆ. ಯಾವುದೇ ಸಂದರ್ಭದಲ್ಲಿ ರಕ್ತದಾನ ಮಾಡುವ ಮನೋಧರ್ಮ ರೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದೂ ಮಲಯಾಳಿ ಅಸೋಸಿಯೇಷನ್ ವೀರಾಜಪೇಟೆ ನಗರ ವತಿಯಿಂದ ನಗರದ ಕೊಡಗು ಡಿ.ಸಿ.ಸಿ ಬ್ಯಾಂಕ್ನ ಸಭಾಂಗಣದಲ್ಲಿ ಅಮೃತ ಮಹೋತ್ಸವದ ಅಂಗವಾಗಿ ಒಂದು ದಿನದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆ ಮಾಡಿ ಮಾತನಾಡಿದ ಶಶಿ ಸುಬ್ರಮಣಿ ಅವರು ಧರ್ಮದ ಅಭಿವೃದ್ಧಿಯೊಂದಿಗೆ ಸಮಾಜ ಸೇವೆಗೆ ಪ್ರತಿಯೊಬ್ಬರು ಮುಂದಾಗಬೇಕು. ರಕ್ತವನ್ನು ದಾನ ಮಾಡುವುದರಿಂದ ರೋಗಿಯ ಜೀವ ಉಳಿಸಲು ಸಹಾಯ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಒಂದು ದಿನದ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ರಕ್ತ ನಿಧಿಯ ಅಧಿಕಾರಿಗಳಾದ ಡಾ. ಕರುಂಬಯ್ಯ ಅವರು ಮಾತನಾಡಿ ರಕ್ತ ನಿಧಿಯಲ್ಲಿ ರಕ್ತದ ಕೊರತೆಯಿದೆ. ಸಂಘ ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸಿ ದಲ್ಲಿ ರೋಗಿಗಳಿಗೆ ಅಗತ್ಯವಾದ ರಕ್ತ ನೀಡಲು ಸಹಾಯವಾಗುತ್ತದೆ. ೧೮ ವರ್ಷ ತುಂಬಿದ ದೃಢಕಾಯ ಯುವಕ ಯುವತಿಯರು ರಕ್ತ ನೀಡಬಹುದಾಗಿದೆ. ರಕ್ತ ನೀಡಿದಲ್ಲಿ ಶರೀರವು ಹದಗೆಡುತ್ತದೆ ಎಂಬುದು ಮೂಡನಂಬಿಕೆ. ರಕ್ತ ನೀಡುವುದರಿಂದ ಆರೋಗ್ಯವು ವೃದ್ಧಿಯಾಗುತ್ತದೆ. ಭಯ -ಆತಂಕಪಡುವ ಅವಶ್ಯಕತೆಯಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದು ಹೇಳಿದರು.
ಹಿಂದೂ ಮಲಯಾಳಿ ಆಸೋಸಿಯೇಷನ್ ವೀರಾಜಪೇಟೆ ನಗರ ಸಂಸ್ಥೆಯ ಅಧ್ಯಕ್ಷ ಎ. ವಿನೂಪ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಶ್ವವು ವಿಜ್ಞಾನ ತಂತ್ರಜ್ಞಾನದಲ್ಲಿ ಮುಗಿಲೆತ್ತರಕ್ಕೆ ಏರಿದರೂ, ರಕ್ತಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲು ಸಾಧ್ಯವಾಗಲಿಲ್ಲ. ಸಮಾಜದ ದೃಢಕಾಯ ಯುವ ಸಮುದಾಯವು ವಿವಿಧ ಸ್ಥಳಗಳಲ್ಲಿ ಆಯೋಜಿಸುವ ರಕ್ತ ದಾನ ಶಿಬಿರಗಳಲ್ಲಿ ಭಾಗವಹಿಸಬೇಕು ಎಂದರು.
ಕಾರ್ಯಕ್ರಮ ಉದ್ದೇಶಿಸಿ ಕೊಡಗು ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ ಅವರು ಮಾತನಾಡಿದರು.
ಆಯೋಜಿತ ರಕ್ತದಾನ ಶಿಬಿರದಲ್ಲಿ ಒಟ್ಟು ೫೬ ಮಂದಿ ರಕ್ತದಾನ ಮಾಡಿದರು. ರಕ್ತ ನಿಧಿ ಸಿಬ್ಬಂದಿಗಳಿAದ ಸಾರ್ವಜನಿಕರಿಗೆ ರಕ್ತ ಗ್ರೂಪಿಂಗ್ ಮಾಡಲಾಯಿತು.
ವೇದಿಕೆಯಲ್ಲಿ ಬ್ಯಾಂಕ್ನ ಮಾಜಿ ವ್ಯವಸ್ಥಾಪಕ ನೆಲ್ಲಮಕ್ಕಡ ಬೆಳ್ಯಪ್ಪ, ಹಾಲಿ ವ್ಯವಸ್ಥಾಪಕ ಸುಬ್ಬಯ್ಯ, ಕ.ರಾ.ರ.ವೆ. ತಾಲೂಕು ಉಪಾಧ್ಯಕ್ಷ ಸಂತೋಷ್ ಟಿ.ವಿ. ಸಂಸ್ಥೆಯ ಉಪಾಧ್ಯಕ್ಷ ದಿನೇಶ್ ನಂಬಿಯಾರ್ ಉಪಸ್ಥಿತರಿದ್ದರು.
ಹಿಂದೂ ಮಲಯಾಳಿ ಅಸೋಸಿಯೇಷನ್ನ ಪದಾಧಿಕಾರಿಗಳು, ನಿರ್ದೇಶಕರು, ಜಿಲ್ಲಾ ರಕ್ತ ನಿಧಿಯ ಸಿಬ್ಬಂದಿಗಳು, ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.