'ಮಡಿಕೇರಿ, ಆ. ೧೮: ಶಾಲಾ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

ಕಳೆದ ತಾ. ೧೩ ರಂದು ಮಕ್ಕಂದೂರು ಗ್ರಾಮ ನಿವಾಸಿ ಲತೀಶ್ ತನ್ನ ದೊಡ್ಡಪ್ಪ ಕೋಟಿ ಪೂಜಾರಿ ಎಂಬವರೊAದಿಗೆ ಸಿದ್ದಾಪುರಕ್ಕೆ ಕೆಲಸಕ್ಕೆಂದು ತೆರಳುತ್ತಿದ್ದ ಸಂದರ್ಭ ಕತ್ತಲೆಕಾಡು ತಿರುವಿನಲ್ಲಿ ಚೆಟ್ಟಳ್ಳಿಯಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಕಾಫಿ ಸಂಶೋಧನಾ ಕೇಂದ್ರದ ಶಾಲಾ ವಾಹನ ಬೈಕ್‌ಗೆ ಡಿಕ್ಕಿಯಾಗಿತ್ತು. ಬೈಕ್ ಸವಾರ ಲತೀಶ್ (೨೨) ಅಂದೇ ಸಾವನ್ನಪ್ಪಿದ್ದ. ಗಂಭೀರ ಗಾಯಗೊಂಡಿದ್ದ ಕೋಟಿ ಪೂಜಾರಿ ಅವರನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಸಾವನ್ನಪ್ಪಿದ್ದಾರೆ.

ಅಂತ್ಯಕ್ರಿಯೆ ತಾ. ೧೯ ರಂದು (ಇಂದು) ಸ್ವಗ್ರಾಮ ಕರ್ಣಂಗೇರಿಯಲ್ಲಿ ನೆರವೇರಲಿದೆ. ಮೃತರು ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.