ಸಿದ್ದಾಪುರ, ಆ. ೧೯: ವ್ಯಕ್ತಿಯೋರ್ವ ಸಂಶಯಾಸ್ಪದ ವಾಗಿ ಸಾವನ್ನಪ್ಪಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದಲ್ಲಿ ನಡೆದಿದೆ. ಮೂಲತಃ ಸಿದ್ದಾಪುರದ ಗುಹ್ಯ ಗ್ರಾಮದ ಕೂಡುಗದ್ದೆಯ ನಿವಾಸಿಯಾಗಿರುವ ಎ.ಬಿ ವಿನೋದ್ (ವಿನು -೩೮) ಎಂಬಾತ ತನ್ನ ಪತ್ನಿ ಹಾಗೂ ಈರ್ವರು ಪುತ್ರಿಯರುಗಳೊಂದಿಗೆ ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದ. ತಾ. ೧೮ ರಂದು ತಾನು ವಾಸ ಮಾಡಿಕೊಂಡಿರುವ ಬಾಡಿಗೆ ಮನೆಯಿಂದ ರಾತ್ರಿ ಹೊರಗಡೆ ತೆರಳಿದ್ದ ಎನ್ನಲಾಗಿದೆ. ಇಂದು ಬೆಳಗ್ಗಿನ ಜಾವ ಸ್ಥಳೀಯರು ಕೆಲಸಕ್ಕೆ ತೆರಳುವ ಸಂದರ್ಭ ನೆಲ್ಯಹುದಿಕೇರಿ ಬೆಟ್ಟದಕಾಡು ರಸ್ತೆಯಲ್ಲಿರುವ ಸ್ಮಶಾನವೊಂದರ ಬಳಿ ಇರುವ ಜೋಡಿ ವಿದ್ಯುತ್ ಕಂಬಗಳ ಮಧ್ಯೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಈತನ ಮೃತದೇಹ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಸಿದ್ದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಈತ ಪಂಚೆಯೊAದರಲ್ಲಿ ಕುತ್ತಿಗೆ ಭಾಗಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿ ನೇತಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಮೃತ ವಿನೋದ್ನ ಚಿಕ್ಕಪ್ಪ ಎ.ಬಿ ಅಶೋಕ್ ಸಿದ್ದಾಪುರ ಪೊಲೀಸ್ ಠಾಣೆಗೆ ಪುಕಾರು ನೀಡಿ, ವಿನೋದ್ ಸಾವಿನಲ್ಲಿ ಸಂಶಯವಿರುತ್ತದೆ. ಈತನ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ದೂರು ನೀಡಿದ್ದಾರೆ. ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿನೋದ್ನ ಸಂಸಾರದಲ್ಲಿ ಕೌಟುಂಬಿಕ ಕಲಹ ಆಗಿಂದಾಗ್ಗೆ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಮೋಹನ್ರಾಜ್ ಹಾಗೂ ಸಹಾಯಕ ಠಾಣಾಧಿಕಾರಿ ತಮ್ಮಯ್ಯ ಹಾಗೂ ಸಿಬ್ಬಂದಿ ಮಲ್ಲಪ್ಪ ಮುಶಿಗೇರಿ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮೃತದೇಹವನ್ನು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮೃತ ವಿನೋದ್ ಪತ್ನಿ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಹಾಗೂ ಪೊಲೀಸರ ತನಿಖೆ ಬಳಿಕ ಸಾವಿನ ನೈಜಾಂಶ ಹೊರ ಬರಲಿದೆೆ. ವಿನೋದ್ನ ಗೆಳೆಯರು ಕೂಡ ಸಂಶಯ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ವಿನೋದ್ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. -ವಾಸು.