ಮಡಿಕೇರಿ, ಆ. ೧೯: ನಿನ್ನೆ ಜಿಲ್ಲೆಗೆ ಆಗಮಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆಯುವ ಯತ್ನ ಮಾಡಿದ್ದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ತಪ್ಪಿತಸ್ಥರ ಬಂಧನಕ್ಕೆ ಒತ್ತಾಯ ಮಾಡಲಾಯಿತು. ಘಟನೆ ವಿರೋಧಿಸಿ ತಾ. ೨೬ ರಂದು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಮಡಿಕೇರಿ ಚಲೋ ನಡೆಸಿ ಎಸ್.ಪಿ. ಕಚೇರಿಗೆ ಘೇರಾವ್ ಹಾಕಲಿದ್ದಾರೆ ಎಂದು ಇದೇ ಸಂದರ್ಭ ಕಾಂಗ್ರೆಸ್ ಘೋಷಿಸಿತು.

ನೆರೆ ಪೀಡಿತ ಪ್ರದೇಶಕ್ಕೆ ಭೇಟಿಗೆಂದು ನಿನ್ನೆ ಬಂದ ಸಂದರ್ಭ ಕಪ್ಪು ಬಾವುಟ ಪ್ರದರ್ಶನದ ಜೊತೆಗೆ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆಯುವ ಪ್ರಯತ್ನವಾಗಿದೆ. ಇದು ಪೊಲೀಸ್ ಇಲಾಖೆಯ ವೈಫಲ್ಯ. ಪೊಲೀಸರು ಬಿಜೆಪಿಯ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಘೋಷಣೆ ಮೂಲಕ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಕಾರ್ಯಕರ್ತರು, ಶಾಸಕರುಗಳ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು. ನಗರದ ವಿಜಯ ವಿನಾಯಕ ದೇವಾಲಯದಿಂದ ಮೆರವಣಿಗೆ ಹೊರಟ ಕಾರ್ಯಕರ್ತರನ್ನು ಪೊಲೀಸರು ತಡೆದರು. ರಸ್ತೆಯಲ್ಲಿ ಕುಳಿತು ಸರಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಹಲ್ಲೆಯ ಸಾಧ್ಯತೆಯೂ ಇತ್ತು - ಪೊನ್ನಣ್ಣ

ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮಾತನಾಡಿ,

(ಮೊದಲ ಪುಟದಿಂದ) ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ಸಿಗರನ್ನು ಅಂದು ಬ್ರಿಟಿಷರು ಬಂಧಿಸಿ ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡಿದ್ದರು. ಇದೀಗ ಪೊಲೀಸರು ನಮ್ಮ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಬ್ರಿಟಿಷ್ ಆಡಳಿತ ನೆನಪಾಗುತ್ತಿದೆ ಎಂದು ವ್ಯಂಗ್ಯವಾಡಿದರು. ಪೊಲೀಸ್ ಇಲಾಖೆಗೆ ನೈತಿಕತೆ ಇದ್ದರೆ ಮೊಟ್ಟೆ ಎಸೆದವರನ್ನು ಬಂಧಿಸಬೇಕು. ಶಾಸಕರುಗಳು ಈ ಘಟನೆಗೆ ಹಾಗೂ ಬಿಜೆಪಿಗೆ ಸಂಬAಧವಿಲ್ಲ ಎಂದು ಹೇಳಿಕೆ ನೀಡುತ್ತಾರೆ. ಬಳಿಕ ಅವರೇ ತೆರಳಿ ಬಂಧಿತರನ್ನು ಬಿಡುಗಡೆ ಮಾಡಿಸುತ್ತಾರೆ. ಸಿದ್ದರಾಮಯ್ಯ ಆಗಮನಕ್ಕೆ ಮುನ್ನ ಜಿಲ್ಲಾ ಪೊಲೀಸರಲ್ಲಿ ಭದ್ರತೆಯ ಬಗ್ಗೆ ವಿಚಾರಣೆ ನಡೆಸಿದಾಗ ಸೂಕ್ತ ಭದ್ರತೆ ಇದೆ. ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂದು ಹೇಳಿದ್ದರು. ಆದರೆ, ತಿತಿಮತಿಯಲ್ಲಿ ವಾಹನವನ್ನು ತಡೆಯುವ ಯತ್ನವಾಗಿತ್ತು.

ಈ ಸಂದರ್ಭ ಸಿದ್ದರಾಮಯ್ಯ ಅವರ ಮೇಲೆ ಮಾರಣಾಂತಿಕ ಹಲ್ಲೆ ಸಂಭವಿಸುವ ಸಾಧ್ಯತೆಯೂ ಇತ್ತು. ಬಿಜೆಪಿ ಸ್ವಾರ್ಥ ರಾಜಕಾರಣ ಮಾಡುತ್ತಿದೆ. ಪೊಲೀಸ್ ಇಲಾಖೆಯನ್ನು ಸ್ವತಂತ್ರöವಾಗಿ ಕಾರ್ಯನಿರ್ವಹಣೆ ಮಾಡಲು ಬಿಡುತ್ತಿಲ್ಲ. ತಾ. ೨೬ ರಂದು ‘ಕೊಡಗು ಚಲೋ’ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಲಿದೆ. ಇದಕ್ಕೆ ಬಿಜೆಪಿಯೇ ಇದೀಗ ವೇದಿಕೆ ಮಾಡಿಕೊಟ್ಟಿದೆ. ಆರೋಪಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕಾದ ಪೊಲೀಸರು ಮೌನವಾಗಿರಲು ಕಾರಣವೇನು ? ಎಂದು ಪ್ರಶ್ನಿಸಿದರು.

ಪೊಲೀಸರ ವೈಫಲ್ಯ - ಧರ್ಮಜ

ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಮಾತನಾಡಿ, ಬಿಜೆಪಿ ಸರಕಾರದ ಪ್ರಾಯೋಜಿತ ಸಂಚು ಇದಾಗಿದ್ದು, ತಿತಿಮತಿಯಲ್ಲಿ ಮೊದಲು ಕಪ್ಪು ಬಾವುಟ ಪ್ರದರ್ಶನ ಮಾಡಿದಾಗ ನಾವು ಸುಮ್ಮನಿದ್ದೆವು. ಮಡಿಕೇರಿಯಲ್ಲಿ ನಡೆದ ಘಟನೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣವಾಗಿದೆ. ವಿಪಕ್ಷ ನಾಯಕರನ್ನು ‘ನೆರಳಿನ ಮುಖ್ಯಮಂತ್ರಿ’ ಎಂದು ಕರೆಯಲಾಗುತ್ತದೆ. ಆದರೆ, ಅವರಿಗೆ ಸೂಕ್ತ ಭದ್ರತೆ ದೊರೆಯಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ನೀಡಿ ಜಿಲ್ಲೆಯ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಮುತ್ಸದಿ ನಾಯಕರ ಮೇಲೆ ಮೊಟ್ಟೆ ಎಸೆಯುವ ಪ್ರಯತ್ನ ಮಾಡಿದವರು ದುಷ್ಕರ್ಮಿಗಳು ಎಂದು ಕಿಡಿಕಾರಿದ ಅವರು, ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲು ಅವಕಾಶ ಇತ್ತು. ಅದನ್ನು ಇಲಾಖೆ ಮಾಡಲಿಲ್ಲ. ಈ ಘಟನೆಗೆ ಕೊಡಗಿನ ಶಾಸಕರುಗಳ ಕೈವಾಡ ಕೂಡ ಇದೆ ಎಂದು ಆರೋಪಿಸಿದರು.

೩೦೭ ಸೆಕ್ಷನ್ ದಾಖಲಿಸಿ - ಚಂದ್ರಮೌಳಿ

ಕಾAಗ್ರೆಸ್ ಮುಖಂಡ ಕೆ.ಎಸ್. ಚಂದ್ರಮೌಳಿ ಮಾತನಾಡಿ, ಘಟನೆ ಸಂಬAಧ ಪೊಲೀಸರು ೩೦೭ ಸೆಕ್ಷನ್ ಅಡಿ ಪ್ರಕರಣ ದಾಖಲಿಸಬೇಕಾಗಿತ್ತು. ದಾಖಲಿಸಿಕೊಂಡ ಪ್ರಕರಣದಲ್ಲಿ ಈ ಸೆಕ್ಷನ್ ಕೈಬಿಡಲಾಗಿದೆ. ವಿಪಕ್ಷ ನಾಯಕರಿಗೆ ಸಿಗಬೇಕಾದ ಭದ್ರತೆ ದೊರೆತಿಲ್ಲ. ಕೊಡಗಿನ ಹೆಸರನ್ನು ಬಿಜೆಪಿ ಹಾಳು ಮಾಡಿದೆ. ಪ್ರತಿಭಟನೆಗೆ ಮುನ್ನವೇ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕಾಗಿತ್ತು ಎಂದರು.

ಪ್ರತಾಪ್ ಸಿಂಹ ಪಾತ್ರ ಇದೆ - ಲಕ್ಷö್ಮಣ್

ಕಾಂಗ್ರೆಸ್ ವಕ್ತಾರ ಹಾಗೂ ಪಕ್ಷದ ಜಿಲ್ಲಾ ಉಸ್ತುವಾರಿ ಲಕ್ಷö್ಮಣ್ ಮಾತನಾಡಿ, ಕೊಡಗಿನ ಮಾರ್ಯದೆ ಹಾಳು ಮಾಡುವ ಕೆಲಸ ಬಿಜೆಪಿಯಿಂದ ಆಗಿದೆ. ಈ ಘಟನೆ ಹಿಂದೆ ಸಂಸದ ಪ್ರತಾಪ್ ಸಿಂಹ ಅವರ ಪಾತ್ರ ಇದೆ. ಮೈಸೂರಿನಿಂದ ಗಲಭೆ ಸೃಷ್ಟಿಸಲೆಂದೇ ಜನರನ್ನು ಕಳುಹಿಸಿಕೊಟ್ಟ ಬಗ್ಗೆ ಮಾಹಿತಿ ಬಂದಿದೆ ಎಂದು ಗಂಭೀರ ಆರೋಪ ಮಾಡಿದ ಅವರು, ಈ ಬಗ್ಗೆ ತನಿಖೆ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದರು.

ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಯುವಮುಖಂಡ ಡಾ.ಮಂಥರ್ ಗೌಡ ಮಾತನಾಡಿದರು. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಗೌಡ, ಕೆಪಿಸಿಸಿ ಪ್ರಮುಖರಾದ ಕೆ.ಪಿ.ಚಂದ್ರಕಲಾ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸೂರಜ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಮುಖಂಡರಾದ ವಿ.ಪಿ.ಶಶಿಧರ್, ನೆರವಂಡ ಉಮೇಶ್, ಚುಮ್ಮಿ ದೇವಯ್ಯ, ಪ್ರಮೋದ್ ಗಣಪತಿ, ಕೊಲ್ಲೀರ ಬೋಪಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.