ಸೋಮವಾರಪೇಟೆ, ಆ. ೧೭: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಾದಾಪುರ ಗ್ರಾಮದ ಜಂಬೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಯಾಂತ್ರೀಕೃತ ಭತ್ತ ನಾಟಿ ಚಾಲನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಚಾಲನೆ ನೀಡಿದರು. ನಂತರ ಮಾತನಾಡಿ, ಅಧಿಕ ಉತ್ಪಾದನಾ ವೆಚ್ಚದಿಂದಾಗಿ ಭತ್ತದ ಕೃಷಿಯಿಂದ ರೈತರು ಹಿಂದೆ ಸರಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ೪೦೦ ಎಕರೆ ಪ್ರದೇಶದಲ್ಲಿ ಯಾಂತ್ರೀಕೃತ ಭತ್ತದ ನಾಟಿಗೆ ಚಾಲನೆ ನೀಡಲಾಗಿದೆ. ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕೆಂದರು.
ಭತ್ತದ ಗದ್ದೆಗಳು ಕಾಫಿ ತೋಟಗಳಾಗಿ ಪರಿವರ್ತನೆಯಾಗುತ್ತಿವೆ. ಕಾಫಿ, ಅಡಿಕೆ ಬೆಳೆಯನ್ನು ಆಹಾರವಾಗಿ ಉಪಯೋಗಿಸಲು ಸಾಧ್ಯವಿಲ್ಲ. ಭತ್ತದ ಉತ್ಪಾದನಾ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಉಳುಮೆ, ನಾಟಿ, ಕಟಾವು, ಒಕ್ಕಣೆ ಮಾಡುವ ತನಕ ಯಂತ್ರೋಪಕರಣಗಳನ್ನು ನಮ್ಮ ಸಂಸ್ಥೆಯ ಸಿಹೆಚ್‌ಎಸ್‌ಸಿ ಕೇಂದ್ರದಲ್ಲಿ ಲಭ್ಯವಿದ್ದು, ಕಡಿಮೆ ಬಾಡಿಗೆ ದರದಲ್ಲಿ ರೈತರಿಗೆ ಯಂತ್ರವನ್ನು ನೀಡುತ್ತಿದೆ ಎಂದರು.
ಇಲಾಖೆಯ ಸಹಾಯಕ ನಿರ್ದೇಶಕÀ ಆರ್.ಕೆ. ಯಾದವ ಬಾಬು ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಬೆಳೆ ವಿಮೆ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಸಂಸ್ಥೆ ಮಡಿಕೇರಿ ಇದರ ಕೃಷಿ ವಿಜ್ಞಾನಿಗಳಾದ ಡಾ. ಬಸವಲಿಂಗಯ್ಯ, ಪ್ರಗತಿಪರ ಕೃಷಿಕರಾದ ರತೀಶ್ ಅವರುಗಳು ರೈತರಿಗೆ ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕರಾದ ಅಯ್ಯಣ್ಣ, ದೇವಯ್ಯ, ಅಪ್ಪಣ್ಣ ಅವರುಗಳನ್ನು ಸನ್ಮಾನಿಸಲಾಯಿತು. ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರೂಪ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎ. ಪೊನ್ನಪ್ಪ, ಪುಷ್ಪಗಿರಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ನರೇಂದ್ರ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.