ಮಡಿಕೇರಿ / ಗೋಣಿ ಕೊಪ್ಪಲು, ಆ.೧೭: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಹಾಗೂ ಗೋಣಿಕೊಪ್ಪ ದಸರಾಕ್ಕೆ ರಾಜ್ಯ ಸರಕಾರ ಅನುದಾನ ಘೋಷಿಸಿದೆ. ಮಡಿಕೇರಿ ದಸರಾಕ್ಕೆ ರೂ. ೧ ಕೋಟಿ ಹಾಗೂ ಗೋಣಿಕೊಪ್ಪಕ್ಕೆ ರೂ. ೫೦ ಲಕ್ಷ ಅನುದಾನ ಘೋಷಿಸಲಾಗಿದೆ. ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು
ಖುದ್ದಾಗಿ ಭೇಟಿ ಮಾಡಿ ಮಡಿಕೇರಿ ದಸರಾಕ್ಕೆ ಅನುದಾನ ಕೋರಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ರೂ. ೧ ಕೋಟಿ ಅನುದಾನ ಮಂಜೂರು ಮಾಡಿರುವುದಾಗಿ ಶಾಸಕ ಅಪ್ಪಚ್ಚು ರಂಜನ್
ತಿಳಿಸಿದ್ದಾರೆ.
(ಮೊದಲ ಪುಟದಿಂದ) ಗೋಣಿಕೊಪ್ಪಲುವಿನ ಕಾವೇರಿ ದಸರಾ ಸಮಿತಿಯಿಂದ ನಡೆಯುವ ದಸರಾ ಉತ್ಸವಕ್ಕೆ ಸರ್ಕಾರದ ವತಿಯಿಂದ ೫೦ ಲಕ್ಷ ಅನುದಾನ ಮಂಜೂರಾಗಿದೆ. ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರ ಮುಂದಾಳತ್ವದಲ್ಲಿ ಮಡಿಕೇರಿ, ಗೋಣಿಕೊಪ್ಪ ಕಾವೇರಿ ದಸರಾ ಸಮಿತಿಯ ಪದಾಧಿಕಾರಿಗಳು ಮುಖ್ಯಮಂತ್ರಿಗಳಾದ ಬಸವರಾಜ ಎಸ್.ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ವರ್ಷಂಪ್ರತಿ ಅತ್ಯಂತ ವಿಶೇಷ ರೀತಿಯಲ್ಲಿ ನಡೆಯುವ ದಸರಾ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಳ್ಳುತ್ತಿರುವುದರಿಂದ ಹೆಚ್ಚಿನ ಅನುದಾನವನ್ನು ಮಂಜೂರು ಮಾಡುವಂತೆ ಶಾಸಕರಾದ ಕೆ.ಜಿ.ಬೋಪಯ್ಯ ಮುಖ್ಯಮಂತ್ರಿಗಳ ಗಮನ ಸೆಳೆದರು. ಈ ವೇಳೆ ದಸರಾ ಸಮಿತಿಯ ನಿಯೋಗದಲ್ಲಿದ್ದ ಪದಾಧಿಕಾರಿಗಳು ಗೋಣಿಕೊಪ್ಪ ದಸರಾಕ್ಕೆ ತನ್ನದೆ ಆದ ವೈಶಿಷ್ಟö್ಯವಿದ್ದು ಗ್ರಾಮೀಣ ಭಾಗದ ಜನರು ಒಂದೆಡೆ ಸೇರಿ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಹಗಲಿನ ವೇಳೆಯಿಂದ ದಸರಾ ಆರಂಭವಾಗುತ್ತದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಈ ವೇಳೆ ಶಾಸಕರಾದ ಕೆ.ಜಿ.ಬೋಪಯ್ಯ ಅವರ ಶಿಫಾರಸ್ಸಿನ ಮೇರೆ ಮುಖ್ಯಮಂತ್ರಿಗಳು ಸ್ಥಳದಲ್ಲಿಯೇ ೫೦ ಲಕ್ಷ ಅನುದಾನವನ್ನು ಘೋಷಣೆ ಮಾಡಿದರು.
ನಿಯೋಗದಲ್ಲಿ ಗೋಣಿಕೊಪ್ಪ ಕಾವೇರಿ ದಸರಾ ಸಮಿತಿಯ ಗೌರವಾಧ್ಯಕ್ಷ ಶಾಸಕರಾದ ಕೆ.ಜಿ.ಬೋಪಯ್ಯ, ದಸರಾ ಸಮಿತಿಯ ಮಹಾಪೋಷಕರುಗಳಾದ ಮಾಜಿ ಜಿ.ಪಂ.ಸದಸ್ಯ ಸಿ.ಕೆ.ಬೋಪಣ್ಣ, ಗೋಣಿಕೊಪ್ಪ ಗ್ರಾ.ಪಂ. ಸದಸ್ಯ ಬಿ.ಎನ್.ಪ್ರಕಾಶ್, ದಸರಾ ಸಮಿತಿಯ ಅಧ್ಯಕ್ಷರಾದ ರಾಮಕೃಷ್ಣ, ಪ್ರ.ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ, ಸದಸ್ಯ ಪಾಪು ರವೀಂದ್ರ ಹಾಜರಿದ್ದರು.