ಎಲ್ಲಾ ಇಲಾಖೆಗಳಲ್ಲೂ ಶೇ.೨ ರಷ್ಟು ಕ್ರೀಡಾ ಮೀಸಲಾತಿ

ಬೆಂಗಳೂರು, ಆ. ೧೬: ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ನಗದು ಬಹುಮಾನ ನೀಡಿ ಗೌರವಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಡ್ಮಿಂಟನ್ ಮಿಕ್ಸ್ಡ್ ಡಬಲ್ಸ್ನಲ್ಲಿ ಬೆಳ್ಳಿ ಗೆದ್ದ ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರದಿಂದ ೧೫ ಲಕ್ಷ ರೂ. ಕ್ರಿಕೆಟ್‌ನಲ್ಲಿ ಬೆಳ್ಳಿ ಪದಕ ವಿಜೇತೆ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ೧೫ ಲಕ್ಷ ರೂ. ಹಾಗೂ ವೇಟ್ ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಗುರುರಾಜ ಪೂಜಾರಿಗೆ ೮ ಲಕ್ಷ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಜೊತೆಗೆ ಅಮೃತ ಕ್ರೀಡಾ ದತ್ತು ಯೋಜನೆಯಡಿ ಆಯ್ಕೆಯಾದ ೭೫ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು. ಅಭಿನಂದನಾ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಬಳಿ ಕ್ರೀಡಾಪ್ರೋತ್ಸಾಹಕ್ಕೆ ಮನವಿ ಮಾಡಿದ ಪದಕ ವಿಜೇತ ಗುರುರಾಜ್ ಪೂಜಾರಿ, ಕರ್ನಾಟಕದ ಕ್ರೀಡಾಪಟುಗಳಿಗೆ ಮತ್ತಷ್ಟು ಬೆಂಬಲ ಸಿಕ್ಕರೆ ಇನ್ನೂ ಹೆಚ್ಚು ಪದಕ ಸಿಗುತ್ತದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿನ ಪ್ರೋತ್ಸಾಹ ಧನ ಕಡಿಮೆ. ಇನ್ನೂ ಹೆಚ್ಚಿನ ಪ್ರೋತ್ಸಾಹ ಧನ ಸಿಕ್ಕರೆ ಕರ್ನಾಟಕದ ಕ್ರೀಡಾಪಟುಗಳು ಮತ್ತಷ್ಟು ಪದಕಗಳನ್ನು ಗಳಿಸುತ್ತಾರೆ ಹಾಗೂ ಕ್ರೀಡಾಪದಕ ವಿಜೇತರಿಗೆ ಸರ್ಕಾರಿ ಉದ್ಯೋಗ ಕೂಡ ನೀಡಬೇಕೆಂದು ಮನವಿ ಮಾಡಿದರು. ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ, ಈಗಾಗಲೇ ಪೋಲಿಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಶೇ.೨ ರಷ್ಟು ಕ್ರೀಡಾ ಮೀಸಲಾತಿ ನೀಡಿದ್ದೇವೆ. ಮುಂದೆ ಎಲ್ಲಾ ಇಲಾಖೆಗಳಿಗೂ ವಿಸ್ತರಣೆ ಮಾಡಿ ಶೇ. ೨ ರಷ್ಟು ಕ್ರೀಡಾ ಮೀಸಲಾತಿ ನೀಡುತ್ತೇವೆ ಎಂದರು.

ಬಿಹಾರ ಸಂಪುಟ ಸಚಿವರಿಗೆ ಖಾತೆ ಹಂಚಿಕೆ

ಪಾಟ್ನಾ, ಆ. ೧೬: ಬದಲಾದ ರಾಜಕೀಯ ವಿದ್ಯಮಾನದಲ್ಲಿ ಬಿಹಾರದಲ್ಲಿ ಎರಡನೇ ಬಾರಿ ‘ಮಹಾಘಟಬಂಧನ್' ಸರ್ಕಾರ ರಚನೆಯಾಗಿದ್ದು, ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಒಂದು ವಾರದ ನಂತರ ಮಂಗಳವಾರ ಅವರು ಸಂಪುಟಕ್ಕೆ ೩೧ ಶಾಸಕರು ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. ಸಂಪುಟ ವಿಸ್ತರಣೆ ಬೆನ್ನಲ್ಲೇ ನಿತೀಶ್ ಕುಮಾರ್ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಗೃಹ ಖಾತೆ, ಸಾಮಾನ್ಯ ಆಡಳಿತ, ಕ್ಯಾಬಿನೆಟ್ ಸೆಕ್ರೆಟರಿಯೇಟ್, ಚುನಾವಣೆ ಮತ್ತು "ಇತರರಿಗೆ ನೀಡದೆ ಇರುವ ಇತರ ಖಾತೆಗಳನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಇನ್ನು ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಅವರು ಆರೋಗ್ಯ, ರಸ್ತೆ ನಿರ್ಮಾಣ, ನಗರ ವಸತಿ ಮತ್ತು ಅಭಿವೃದ್ಧಿ, ಗ್ರಾಮೀಣ ಕಾಮಗಾರಿಗಳಂತಹ ಪ್ರಮುಖ ಖಾತೆಗಳನ್ನು ಪಡೆದುಕೊಂಡಿದ್ದಾರೆ. ತೇಜಸ್ವಿ ಯಾದವ್ ಅವರ ಹಿರಿಯ ಸಹೋದರ ತೇಜ್ ಪ್ರತಾಪ್ ಯಾದವ್ ಅವರಿಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ನೀಡಲಾಗಿದೆ. ವಿಜಯ್ ಕುಮಾರ್ ಚೌಧರಿ ಅವರಿಗೆ ಹಣಕಾಸು, ವಾಣಿಜ್ಯ ತೆರಿಗೆ ಮತ್ತು ಸಂಸದೀಯ ವ್ಯವಹಾರಗಳ ಖಾತೆ, ಬಿಜೇಂದ್ರ ಯಾದವ್ ಅವರಿಗೆ ವಿದ್ಯುತ್, ಯೋಜನೆ ಮತ್ತು ಅಭಿವೃದ್ಧಿ ಖಾತೆಗಳನ್ನು ಪಡೆದಿದ್ದಾರೆ. ಇಂದು ಬೆಳಿಗ್ಗೆ ಪ್ರಮುಖ ಮಿತ್ರ ಪಕ್ಷವಾದ ಆರ್‌ಜೆಡಿಯ ೧೬ ಶಾಸಕರು, ಜೆಡಿ(ಯು)ದಿಂದ ೧೧, ಕಾಂಗ್ರೆಸ್‌ನಿAದ ಇಬ್ಬರು, ಹಿಂದೂಸ್ತಾನಿ ಅವಾಮ್ ಮೋರ್ಚಾ (ಹೆಚ್‌ಎಎಂ) ಮತ್ತು ಒಬ್ಬ ಪಕ್ಷೇತರು ಸೇರಿದಂತೆ ೩೧ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಕಣಿವೆ ತೊರೆಯುವಂತೆ ಕಾಶ್ಮೀರಿ ಪಂಡಿತರಿಗೆ ಕೆಪಿಎಸ್‌ಎಸ್ ಒತ್ತಾಯ

ಶ್ರೀನಗರ, ಆ. ೧೬: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಉಗ್ರರ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಣಿವೆ ತೊರೆಯುವಂತೆ ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ (ಕೆಪಿಎಸ್‌ಎಸ್) ಮಂಗಳವಾರ ಸಮುದಾಯದ ಸದಸ್ಯರಿಗೆ ಒತ್ತಾಯಿಸಿದೆ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಮತ್ತೊಂದು ಮಾರಣಾಂತಿಕ ದಾಳಿ ನಡೆದಿದ್ದು, ಈ ಮೂಲಕ ಉಗ್ರರು ಕಾಶ್ಮೀರ ಕಣಿವೆಯ ಎಲ್ಲಾ ಪಂಡಿತರನ್ನು ಕೊಲ್ಲುವ ಸಂದೇಶ ರವಾನಿಸಿದ್ದಾರೆ ಎಂದು ಕೆಪಿಎಸ್‌ಸಿ ಮುಖ್ಯಸ್ಥ ಸಂಜಯ್ ಟಿಕೂ ಅವರು ಹೇಳಿದ್ದಾರೆ. ಕಣಿವೆಯನ್ನು ತೊರೆದು ಜಮ್ಮು ಮತ್ತು ದೆಹಲಿಯಂತಹ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಲ್ಲಾ ಕಾಶ್ಮೀರಿ ಪಂಡಿತರಿಗೆ ನಾನು ಒತ್ತಾಯಿಸಿದ್ದೇನೆ. ನಾವು ಇದನ್ನು ಕಳೆದ ೩೨ ವರ್ಷಗಳಿಂದ ನೋಡುತ್ತಿದ್ದೇವೆ. ಅಲ್ಪಸಂಖ್ಯಾತರಿಗೆ ಅದರಲ್ಲೂ ಕಾಶ್ಮೀರಿ ಪಂಡಿತರಿಗೆ ಭದ್ರತೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ನಾವು ಎಷ್ಟು ದಿನ ಹೀಗೆ ಸಾಯಬೇಕು? ಸಾಕು ಸಾಕು ಎಂದು ಟಿಕೂ ಅವರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಮುಂದುವರೆದ ಗಲಭೆ

ಶಿವಮೊಗ್ಗ, ಆ. ೧೬: ವೀರ ಸಾವರ್ಕರ್ -ಟಿಪ್ಪು ಫ್ಲೆಕ್ಸ್ ಹರಿದು ಹಾಕಿದ ವಿಚಾರಕ್ಕೆ ಸಂಬAಧಿಸಿದAತೆ ಶಿವಮೊಗ್ಗದಲ್ಲಿ ಆರಂಭವಾದ ಗಲಾಟೆ, ಚಾಕು ಇರಿತ ನಿಷೇಧಾಜ್ಞೆ ನಡುವೆಯೂ ಮಂಗಳವಾರ ಕೂಡ ಗಲಭೆ ಮುಂದುವರಿದಿದೆ. ಕಳೆದ ಆರು ತಿಂಗಳಿನಿAದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ, ಕೋಮು ಗಲಭೆಗೆ ಸುದ್ದಿಯಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಮ್ಮೆ ಅಂತಹದ್ದೇ ವಾತಾವರಣ ಎದ್ದಿದೆ. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಪಥಸಂಚಲನ ನಡೆಸಿ ದುಷ್ಕರ್ಮಿಗಳಲ್ಲಿ ಭಯಹುಟ್ಟಿಸಲು ಮತ್ತು ನಾಗರಿಕರಲ್ಲಿ ಧೈರ್ಯ ತುಂಬಲು ಯತ್ನಿಸಿದರೂ ಯುವಕರು ಕ್ಯಾರೇ ಅನ್ನುತ್ತಿಲ್ಲ. ಇಂದು ನಿಷೇಧಾಜ್ಞೆಯ ನಡುವೆಯೂ ಭದ್ರಾವತಿಯ ನೆಹರು ಬಡಾವಣೆಯಲ್ಲಿ ಗಲಾಟೆ ನಡೆದು ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದ್ದು, ಚಾಕುವಿನಿಂದ ಇರಿಯಲು ಯತ್ನಿಸಲಾಗಿದೆ. ಕಾರ್ಯಕರ್ತ ಸುನಿಲ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಗಾಯಾಳುವನ್ನು ಪ್ರಸ್ತುತ ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಳೇ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಡಿಚ್ಚಿ ಆಲಿಯಾಸ್ ಮುಬಾರಕ್ ಸೇರಿದಂತೆ ಮೂವರ ಮೇಲೆ ಹಲ್ಲೆ ಆರೋಪ ಕೇಳಿಬರುತ್ತಿದೆ.

ಭೀಕರ ಅಪಘಾತದಲ್ಲಿ ೬ ಯೋಧರು ಹುತಾತ್ಮ

ಅನಂತ್‌ನಾಗ್, ಆ. ೧೬: ಜಮ್ಮು-ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಚಂದನ್ ವಾರಿ ಪಹಲ್ಗಾಮ್ ಸಮೀಪ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ೬ ಮಂದಿ ಐಟಿಬಿಪಿ ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಶ್ರೀನಗರದ ಸೇನಾಸ್ಪತ್ರೆಗೆ ಏರ್‌ಲಿಫ್ಟ್ ಮಾಡಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ೩೭ ಮಂದಿ ಐಟಿಬಿಪಿ ಯೋಧರು ಮತ್ತು ಇಬ್ಬರು ಜಮ್ಮು-ಕಾಶ್ಮೀರ ಪೊಲೀಸರನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಪಹಲ್ಗಾಮ್ ಸಮೀಪ ನದಿ ಪಾತ್ರದಲ್ಲಿ ಬ್ರೇಕ್ ವೈಫಲ್ಯಗೊಂಡು ಭೀಕರ ಅಪಘಾತ ಸಂಭವಿಸಿದ್ದು, ಹುತಾತ್ಮ ಯೋಧರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಅತ್ಯಾಚಾರ ಆರೋಪಿಗಳ ಬಿಡುಗಡೆ

ಮುಂಬೈ, ಆ. ೧೬: ೨೦೦೨ ಗೋಧ್ರಾ ಗಲಭೆ ವೇಳೆ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳ ಗಾಗಿದ್ದ ೧೧ ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ. ೧೧ ಅಪರಾಧಿಗಳು ಗೋಧ್ರಾ ಸಬ್ ಜೈಲಿನಲ್ಲಿದ್ದು ಇಂದು ಬಿಡುಗಡೆ ಮಾಡಲಾಗಿದೆ. ಇನ್ನು ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿರುವುದು ಬಿಲ್ಕಿಸ್ ಬಾನು ಕುಟುಂಬವನ್ನು ಆಶ್ಚರ್ಯ ಕ್ಕೀಡುಮಾಡಿದೆ. ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಕುರಿತು ಮಾಹಿತಿ ನೀಡಿರುವ ಗುಜರಾತ್ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ರಾಜ್ ಕುಮಾರ್ ಅವರು, ಅಪರಾಧಿಗಳು ಜೈಲಿನಲ್ಲಿ ೧೪ ವರ್ಷ ಪೂರ್ಣಗೊಳಿಸಿದ್ದಾರೆ. ಅಪರಾಧಿಗಳ ವಯಸ್ಸು, ಜೈಲಿನಲ್ಲಿನ ಅವರ ನಡವಳಿಕೆ ಮತ್ತು ಮುಂತಾದ ಇತರ ಅಂಶಗಳನ್ನು ಪರಿಗಣಿಸಿ ಕ್ಷಮಾ ರ್ಪಣೆಗಾಗಿ ಅರ್ಜಿಯನ್ನು ಪರಿಗಣಿಸಲಾಗಿದೆ ಎಂದರು. ಗುಜರಾತ್‌ನ ದಾಹೋದ್ ಜಿಲ್ಲೆಯ ಲಿಮ್ಖೇದಾ ತಾಲೂಕಿನಲ್ಲಿ ೨೦೦೨ ಮಾರ್ಚ್ ೩ ರಂದು ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅಲ್ಲದೆ ೧೪ ಮಂದಿಯನ್ನು ಗುಂಪೊAದು ಹೊಡೆದು ಕೊಂದಿತ್ತು.