ಕೂಡಿಗೆ, ಆ. ೧೬: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ತಾಲೂಕು ಮಟ್ಟದ ಹಾಕಿ ಪಂದ್ಯಾವಳಿಯು ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯ ಹಾಕಿ ಮೈದಾನದಲ್ಲಿ ನಡೆಯಿತು.

ಕ್ರೀಡಾ ಕೂಟಕ್ಕೆ ಕಾಲೇಜಿನ ಪ್ರಾಂಶುಪಾಲ ಡಾ. ಬಸಪ್ಪ ಚಾಲನೆ ನೀಡಿದರು. ಪಠ್ಯ ಶಿಕ್ಷಣದಷ್ಟೇ ಮಹತ್ವ ಕ್ರೀಡೆಗೆ ಇರುವುದರಿಂದ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಮ್ಮ ಭವಿಷ್ಯವನ್ನು ಉತ್ತಮಗೊಳಿಸಲು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕೂಡಿಗೆ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ ಮಾತನಾಡಿ, ಕ್ರೀಡೆಯು ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾಗುವುದರ ಜೊತೆಗೆ ಒಂದೆಡೆ ಸೇರುವ ಮೂಲಕ ಉತ್ತಮ ವಿಷಯಗಳ ಚರ್ಚೆಗಳು ತಮ್ಮ ಬದುಕಿನ ಮೌಲ್ಯಗಳನ್ನು ಕಲಿಸಿಕೊಡುತ್ತದೆ ಎಂದರು.

ಈ ಸಂದರ್ಭದಲ್ಲಿ ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯ ದೇವಕುಮಾರ್ ಶಾಲೆಯ ಹಾಕಿ ತರಬೇತಿದಾರ ವೆಂಕಟೇಶ ಕಾಲೇಜು ಉಪನ್ಯಾಸಕರಾದ ನಾಗಪ್ಪ, ರಮೇಶ್, ಸತೀಶ್, ಹೇಮುರಾಜ್, ಸೇರಿದಂತೆ ಕ್ರೀಡಾ ಶಾಲೆಯ ಶಿಕ್ಷಕರ ವೃಂದ ಮತ್ತು ಕಾಲೇಜು ಉಪನ್ಯಾಸಕರ ವೃಂದ ಹಾಜರಿದ್ದರು.

ಹಾಕಿ ಪಂದ್ಯಾವಳಿಯಲ್ಲಿ ಕುಶಾಲನಗರ ಅನುಗ್ರಹ ಕಾಲೇಜು ತಂಡ ಪ್ರಥಮ, ಕೂಡಿಗೆ ಪದವಿ ಪೂರ್ವ ಕಾಲೇಜು ತಂಡ ದ್ವೀತಿಯ ಸ್ಥಾನ ಪಡೆದುಕೊಂಡಿತು.