ಸೋಮವಾರಪೇಟೆ, ಆ. ೧೬: ಖಾಸಗಿ ಜಾಗದಲ್ಲಿದ್ದ ಬೀಟೆ ಮರವನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖಾ ಅಧಿಕಾರಿಗಳು, ಮರಗಳ ಸಹಿತ ಈರ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೀಟೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಟಿಪ್ಪರ್ ಲಾರಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮೋರಿಕಲ್ಲು ಬಸವನಹಳ್ಳಿ ಗ್ರಾಮದ ಅಜಿತ್ ಎ.ಜಿ., ಕಲ್ಕಂದೂರು ಗ್ರಾಮದ ಕೆ.ಎಂ. ನಿಖಿಲ್, ದೊಡ್ಡಬ್ಬೂರು ಗ್ರಾಮದ ಎ.ಟಿ. ಸೋಮಶೇಖರ ಅವರುಗಳು, ಬಾಣಾವರ ಶಾಖೆ ವ್ಯಾಪ್ತಿಯ ದೊಡ್ಡೊಬ್ಬೂರು ಗ್ರಾಮದ ನಿವಾಸಿ ಸೋಮಶೇಖರ್ ಎಂಬವರಿಗೆ ಸೇರಿದ ಜಾಗದಲ್ಲಿ ಒಣಗಿ ನಿಂತಿದ್ದ ಬೀಟೆ ಮರವನ್ನು ಅಕ್ರಮವಾಗಿ ಕಡಿದು ನಾಟಾಗಳಾಗಿ ಪರಿವರ್ತಿಸಿ ಟಿಪ್ಪರ್ ಲಾರಿಗೆ ತುಂಬಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಈ ಸಂದರ್ಭ ಮೂವರು ಆರೋಪಿಗಳ ಪೈಕಿ ಅಜಿತ್ ಮತ್ತು ನಿಖಿಲ್ ಅವರುಗಳನ್ನು ಸ್ಥಳದಲ್ಲೇ ಬಂಧಿಸಿದ್ದು, ಆರೋಪಿಗಳಿಂದ ೫ ಬೀಟೆ ಮರದ ನಾಟಗಳು, ಒಂದು ಟಾಟಾ ಕಂಪನಿಯ ಟಿಪ್ಪರ್ ವಾಹನ (ಏಂ -೧೨ ಃ-೬೮೯೧)ವನ್ನು ವಶಪಡಿಸಿಕೊಂಡು ಅರಣ್ಯ ಮೊಕ್ಕದ್ದಮೆ ದಾಖಲಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇನ್ನೋರ್ವ ಆರೋಪಿ ಸೋಮಶೇಖರ್ ಎಂಬವನು ಸ್ಥಳದಿಂದ ಓಡಿಹೋಗಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆರ್.ಎಫ್.ಓ. ಹೆಚ್.ಪಿ. ಚೇತನ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿ.ಆರ್.ಎಫ್.ಓ. ಹೆಚ್.ಎಂ. ರಾಕೇಶ್, ಅರಣ್ಯ ರಕ್ಷಕ ಸದಾನಂದ ಹಿಪ್ಪರಗಿ, ಪ್ರಸಾದ್ ಕುಮಾರ್, ಪ್ರಕಾಶ್, ಅರಣ್ಯ ವೀಕ್ಷಕ ಅಂಥೋನಿ, ವಿಕಾಸ್ ಅವರುಗಳು ಭಾಗವಹಿಸಿದ್ದರು.