ಮಡಿಕೇರಿ, ಆ. ೧೫ : ಭಾರತ ಸ್ವಾತಂತ್ರö್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಹಿರಿಯ ಪತ್ರಕರ್ತ, ರವಿ ಪತ್ರಿಕೆಯ ಸಂಪಾದಕ ಎಂ.ಪಿ. ಕೃಷ್ಣರಾಜು ಅವರನ್ನು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಭಾರತ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಸುಸಂದರ್ಭದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ದಿಂದ ರಾಜ್ಯಾದ್ಯಂತ ‘ಮನೆಯಂಗಳ ದಲ್ಲಿ ಮನದುಂಬಿ ನಮನ' ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸ್ವಾತಂತ್ರö್ಯ ನಂತರ ಪತ್ರಿಕಾರಂಗದ ಏಳಿಗೆಗಾಗಿ ದುಡಿದವರನ್ನು ಅವರ ಮನೆಗೆ ತೆರಳಿ ಗೌರವಿಸಲಾಗುತ್ತಿದೆ. ಅದರಂತೆ ಮಡಿಕೇರಿಯ ದೇಚೂರು ವಿನಲ್ಲಿ ನೆಲೆಸಿರುವ ಕೃಷ್ಣರಾಜು ಮನೆಗೆ ತೆರಳಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಶಾಲು ಹೊದಿಸಿ, ಫಲ ತಾಂಬೂಲ, ಉಡುಗೊರೆ ನೀಡಿ ಗೌರವಿಸಿದರು.
ದಶಕಗಳ ಕಾಲ ಪತ್ರಿಕೋದ್ಯಮ ದಲ್ಲಿ ತೊಡಗಿಸಿಕೊಂಡಿದ್ದ ತನ್ನನ್ನು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗೌರವಿಸಿದ ಬಗ್ಗೆ ಕೃಷ್ಣರಾಜು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ನಡೆದ ಸಂವಾದದಲ್ಲಿ ವೃತ್ತಿಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊAಡರು. ಹಲವು ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸಿ ‘ರವಿ' ಪತ್ರಿಕೆ ಯನ್ನು ಬೆಳೆಸಿದ್ದೆವು. ಸ್ವಾರ್ಥವಿಲ್ಲದೆ, ಯಾರೆದುರಿಗೂ ಕೈಚಾಚದೆ ಸೇವೆ ಸಲ್ಲಿಸಿದ ತೃಪ್ತಿ ಇದೆ. ತಂತ್ರಜ್ಞಾನ ಬಹಳ ಹಿಂದೆ ಇದ್ದ ಕಾಲದಲ್ಲೂ ಜನರಿಗೆ ಸುದ್ದಿ ಮುಟ್ಟಿಸಬೇಕೆಂದು ಪಣತೊಟ್ಟು ಹಗಲಿರುಳು ದುಡಿದಿದ್ದೇವೆಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.
ಇಂದು ಪತ್ರಿಕಾ ರಂಗದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ತಂತ್ರಜ್ಞಾನದ ಬಳಕೆಯ ಪರಿಣಾಮ ಕ್ಷಣ ಕ್ಷಣದಲ್ಲಿ ಸುದ್ದಿಗಳು ಜನರನ್ನು ತಲುಪುತ್ತಿವೆ. ಪತ್ರಕರ್ತರು ಯಾರ ಮುಲಾಜಿಗೂ ಒಳಗಾಗದೆ, ಯಾವುದೇ ಆಮಿಷಕ್ಕೆ ಬಲಿಯಾಗದೆ ವೃತ್ತಿಯ ಘನತೆ ಹೆಚ್ಚಿಸಲು ಪಣತೊಟ್ಟು ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಕೊಡಗಿನಲ್ಲಿ ಹಲವು ಪತ್ರಕರ್ತರಿಗೆ ಕೃಷ್ಣರಾಜು ಮಾರ್ಗದರ್ಶಕರಾಗಿದ್ದಾರೆ. ಇಂತಹÀ ಮಾರ್ಗದರ್ಶನ, ಸಲಹೆ ಸ್ವೀಕರಿಸುತ್ತಾ ಇಂದಿನ ಪತ್ರಕರ್ತರು ಮುನ್ನಡೆಯ ಬೇಕು. ಆಧುನಿಕ ಸೌಲಭ್ಯಗಳು ಸಿಗದಿದ್ದ ಕಾಲದಲ್ಲಿ ಪತ್ರಿಕೆಯನ್ನು ದಶಕಗಳ ಕಾಲ ನಡೆಸಿಕೊಂಡು ಬಂದ ಕೃಷ್ಣರಾಜು ಕುಟುಂಬದ ಆಸಕ್ತಿ ಮತ್ತು ಪತ್ರಿಕಾ ರಂಗದ ಮೇಲಿನ ಪ್ರೀತಿ ಸದಾ ಸ್ಮರಣೀಯ ಎಂದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಆನಂದ್ ಕೊಡಗು ವಂದಿಸಿದರು. ಕಾರ್ಯ ದರ್ಶಿಗಳಾದ ಪ್ರೇಮ್ ಕುಮಾರ್, ಯಶೋದ ಉಪಾಧ್ಯಕ್ಷ ಮಂಜು, ನಿರ್ದೇಶಕರಾದ ಎಚ್.ಜೆ. ರಾಕೇಶ್, ಕಿಶೋರ್ ರೈ ಕತ್ತಲೆಕಾಡು, ನವೀನ್ ಸುವರ್ಣ, ಅಬ್ದುಲ್ಲಾ, ಸ್ಟಾö್ಯನ್ಲಿ ಡಿ., ರಿಜ್ವಾನ್ ಹುಸೇನ್, ಸದಸ್ಯ ಲೋಹಿತ್ ಗೌಡ ಈ ಸಂದರ್ಭ ಉಪಸ್ಥಿತರಿದ್ದರು.