ಮಡಿಕೇರಿ, ಆ. ೧೩: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ. ಮಡಿಕೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ ತಾ.೧೨ರಂದು ಯೂನಿಯನ್ ಸಭಾಂಗಣದಲ್ಲಿ ಜಿಲ್ಲೆಯ ಪ್ಯಾಕ್ಸ್, ಪಟ್ಟಣ ಸಹಕಾರ ಬ್ಯಾಂಕ್, ಪಿಕಾರ್ಡ್ ಬ್ಯಾಂಕ್, ಎ.ಪಿ.ಸಿ.ಎಂ.ಎಸ್., ಪತ್ತಿನ ಸಹಕಾರ ಸಂಘ ಹಾಗೂ ಜೇನು ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಜಿ.ಎಸ್.ಟಿ ಮತ್ತು ಆದಾಯ ತೆರಿಗೆ ಕುರಿತು ವಿಶೇಷ ಶಿಕ್ಷಣ ಕಾರ್ಯ ಕ್ರಮವನ್ನು ಏರ್ಪಡಿಸಲಾಯಿತು.
ಜಿ.ಎಸ್.ಟಿ. ಬಗ್ಗೆ ದೇಶದಲ್ಲಿ ಹಲವಾರು ಬಗೆಗಿನ ಚರ್ಚೆಗಳು ನಡೆಯುತ್ತಿದ್ದರೂ, ಅತ್ಯುತ್ತಮವಾಗಿ ಅನುಷ್ಠಾನಗೊಂಡು ವಿಶ್ವದಲ್ಲೇ ಭಾರತವನ್ನು ಗುರುತಿಸುವಂತಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ಪರೋಕ್ಷವಾಗಿಯಾದರೂ ಜಿ.ಎಸ್.ಟಿ. ಪಾವತಿಸುತ್ತಿದ್ದಾರೆ ಎಂದು ಶಿಕ್ಷಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಬಿ.ಡಿ. ಮಂಜುನಾಥ್ ಅವರು ಅಭಿಪ್ರಾಯಪಟ್ಟರು. ದೇಶದ ಆರ್ಥಿಕ ಪ್ರಗತಿಯಲ್ಲಿ ತೆರಿಗೆಯು ಮಹತ್ತರ ಪಾತ್ರವನ್ನು ವಹಿಸುತ್ತದೆ. ಪ್ರಪಂಚದ ೧೯೩ ರಾಷ್ಟçಗಳಲ್ಲಿ ೧೬೦ ರಾಷ್ಟçಗಳು ಜಿ.ಎಸ್.ಟಿ.ಯನ್ನು ಅಳವಡಿಸಿಕೊಳ್ಳುತ್ತಿವೆ. ಜುಲೈ ೨೦೨೨ ತಿಂಗಳಿನಲ್ಲಿ ೧.೪೯ ಕೋಟಿ ಜಿ.ಎಸ್.ಟಿ. ಸಂಗ್ರಹಣೆಯಾಗಿರುವುದು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅವರು, ಪ್ರಪಂಚದ ಉತ್ತಮ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆಯುತ್ತಿದೆ. ಸಂದಿಗ್ದ ಪರಿಸ್ಥಿತಿಯಲ್ಲಿಯೂ ಕೂಡ ದೇಶದ ಪ್ರಜೆಗಳ ಸುರಕ್ಷತೆಯನ್ನು ಮನಗಂಡು ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿರುವ ಭಾರತ ಸರ್ಕಾರವನ್ನು ವಿಶ್ವವೇ ಕೊಂಡಾಡುತ್ತಿದೆ. ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಇಸ್ರೇಲ್‌ನಂತಹ ಸಣ್ಣ ರಾಷ್ಟçದಿಂದಲೂ ದೇಶಭಕ್ತಿಯನ್ನು ಅನುಕರಿಸಬೇಕು. ಏಕೆಂದರೆ ಅಲ್ಲಿ ಪಿ.ಯು.ಸಿ. ಹಂತದವರೆಗೆ ಕಡ್ಡಾಯ ಉಚಿತ ಶಿಕ್ಷಣವನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳು ಸೈನ್ಯಕ್ಕೆ ಸೇರಲೇಬೇಕು. ಇದನ್ನು ಅವಲೋಕಿಸಿದರೆ ಅಗ್ನಿಪಥ್ ಎಂಬುದು ದೇಶ ಕಂಡ ಅತ್ಯುತ್ತಮ ಯೋಜನೆಯಾಗಿದ್ದು, ದೇಶದ ಕುರಿತಾದ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು. ಈಗಾಗಲೇ ೬ ಕೋಟಿಗೂ ಮಿಗಿಲಾಗಿ ಭಾರತೀಯರು ಆದಾಯ ತೆರಿಗೆ ರಿಟನ್ಸ್ ಸಲ್ಲಿಸಿದ್ದಾರೆ ಎಂದು ಮಾಹಿರಿ ನೀಡಿದರು. ತರಬೇತಿಗಳಲ್ಲಿ ಭಾಗವಹಿಸಿ ವಿಷಯ ಮನದಟ್ಟು ಮಾಡಿಕೊಂಡು ಸಹಕಾರ ಪತ್ರಿಕೆಗಳನ್ನು ಪ್ರೋತ್ಸಾಹಿಸುತ್ತಾ ಸಾಹಿತ್ಯ ಹಾಗೂ ಸಹಕಾರ ಕ್ಷೇತ್ರವನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ವ್ಯವಸ್ಥಾಪಕಿ ಮಂಜುಳ ಆರ್. ಅವರು, ಸ್ವಾಗತವನ್ನು ಯೂನಿಯನ್ ನಿರ್ದೇಶಕ ಕೆ.ಎಸ್. ಗಣಪತಿ ಹಾಗೂ ವಂದನಾರ್ಪಣೆ ಮತ್ತು ನಿರೂಪಣೆಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಅವರು ನೆರವೇರಿಸಿದರು. ಕಾರ್ಯಕ್ರಮಕ್ಕೆ ಬಿ.ಸಿ. ಅರುಣ್ ಕುಮಾರ್ ಸಹಕಾರ ನೀಡಿದರು.