ಮಡಿಕೇರಿ, ಆ. ೧೪: ಮಡಿಕೇರಿಯಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದುದನ್ನು ಹಿಂದೂ ಜಾಗರಣ ವೇದಿಕೆ ಪತ್ತೆ ಹಚ್ಚಿದೆ. ಯಾವುದೇ ಪರವಾನಗಿ ಇಲ್ಲದೆ ರಾಜಾರೋಷವಾಗಿ ಗೂಡ್ಸ್ ವಾಹನವೊಂದರಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಮಡಿಕೇರಿ ನಗರ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು ಎರಡು ಗೋವುಗಳ ಸಮೇತ ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ್ದಾರೆ.

ಇಂದು ಬೆಳಿಗ್ಗೆ ೧೦ ಗಂಟೆಗೆ ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿಯಿಂದ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನ (ಕೆಎ-೪೫ ಎ-೨೧೯೬) ವೇಗವಾಗಿ ಬರುತ್ತಿದ್ದುದನ್ನು ಗಮನಿಸಿದ ವೇದಿಕೆಯ ಪದಾಧಿಕಾರಿ ಗಳು ವಾಹನ ತಡೆದು ವಿಚಾರಿಸಿದಾಗ ವಾಹನದಲ್ಲಿ ಒಂದು ಹಸು ಹಾಗೂ ಕರು ಪತ್ತೆಯಾಗಿದೆ. ಈ ಬಗ್ಗೆ ಕೇಳಿದಾಗ, ಯಾವುದೇ ಪರವಾನಗಿ ಇಲ್ಲದೆ, ಸಾಗಾಟ ಮಾಡುತ್ತಿದ್ದುದು ಕಂಡುಬAದಿದೆ. ಗೋವುಗಳನ್ನು ಕೆ.ಆರ್.ಪುರಕ್ಕೆ ಸಾಗಿಸುತ್ತಿದ್ದುದಾಗಿ ವಾಹನದಲ್ಲಿದ್ದ ಕೃಷ್ಣ ಹಾಗೂ ರವಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೋವುಗಳ ಸಹಿತ ಈರ್ವರನ್ನು ಮಡಿಕೇರಿ ನಗರ ಪೊಲೀಸರಿಗೆ ಹಿಂಜಾವೇ ಪದಾಧಿಕಾರಿಗಳು ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.