*ಸಿದ್ದಾಪುರ, ಆ.೧೪ : ಅಭ್ಯತ್ ಮಂಗಲ ಮತ್ತು ನೆಲ್ಯಹುದಿಕೇರಿ ಭಾಗದಲ್ಲಿ ಶಾಲೆಗಳ ಬಳಿ ಕಾಡಾನೆಗಳು ಕಾಣಿಸಿಕೊಂಡು ಆತಂಕವನ್ನು ಸೃಷ್ಟಿಸಿವೆ.
ಅಭ್ಯತ್ ಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಟಾಟಾ ಕಾಫಿ ತೋಟದಲ್ಲಿ ಒಂಟಿ ಸಲಗವೊಂದು ಓಡಾಡುತ್ತಿದೆ. ಕಾಲಿನ ಭಾಗದಲ್ಲಿ ಗಾಯಗಳಾಗಿದ್ದು, ಇತ್ತೀಚೆಗೆ ಎಂ.ಜಿ ಕಾಲೋನಿಯಲ್ಲಿ ಇದೇ ಆನೆ ಕಂಡು ಬಂದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಅರಣ್ಯ ಇಲಾಖೆ ತಕ್ಷಣ ಇದನ್ನು ಸೆರೆ ಹಿಡಿದು ಸೂಕ್ತ ಚಿಕಿತ್ಸೆ ನೀಡಿ ಸಾಕಾನೆ ಶಿಬಿರಕ್ಕೆ ಸೇರಿಸಬೇಕೆಂದು ಒತ್ತಾಯಿಸಿದ್ದಾರೆ. ನೆಲ್ಯಹುದಿಕೇರಿ ಶಾಲೆ ಬಳಿಯ ನಿವಾಸಿ ಬಾಲು ಎಂಬುವವರ ಮನೆಯಾವರಣಕ್ಕೆ ನುಗ್ಗಿದ ಕಾಡಾನೆಯೊಂದು ತೆಂಗು, ಕಾಫಿ ಸೇರಿದಂತೆ ವಿವಿಧ ಸಸಿಗಳನ್ನು ನಾಶ ಮಾಡಿದೆ. ಶಾಲೆಗಳ ಸಮೀಪದಲ್ಲೇ ಕಾಡಾನೆಗಳು ಸಂಚರಿಸುತ್ತಿರುವುದರಿAದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ. ಅಭ್ಯತ್ ಮಂಗಲ ಮತ್ತು ನೆಲ್ಯಹುದಿಕೇರಿ ಭಾಗದ ಬೆಳೆಗಾರರು ವನ್ಯಜೀವಿಯ ದಾಳಿಯಿಂದ ನಿತ್ಯ ನಷ್ಟ ಅನುಭವಿಸುತ್ತಿದ್ದಾರೆ.