ಸಿದ್ದಾಪುರ, ಆ. ೧೪: ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೆಲ್ಯಹುದಿಕೇರಿ ಘಟಕದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ನೆಲ್ಯಹುದಿಕೇರಿ ಕಾವೇರಿ ಸೇತುವೆಯ ಬಳಿಯಿಂದ ಮುತ್ತಪ್ಪ ದೇವಸ್ಥಾನದವರೆಗೆ ಸಾವಿರಾರು ಹಿಂದೂ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ, ಪಂಜನ್ನು ಹಿಡಿದು ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮವನ್ನು ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಡಿ. ಚೀಯಣ್ಣ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ ಚಿಕ್ಕಮಗಳೂರಿನ ವಿಶ್ವ ಹಿಂದೂ ಪರಿಷತ್ ಪ್ರಮುಖ ರಂಗಣ್ಣ ಮಾತನಾಡಿ, ಅಖಂಡ ಭಾರತವನ್ನು ತ್ರಿಖಂಡ ಮಾಡಿರುವ ಕರಾಳ ಘಟನೆಯನ್ನು ನೆನಪಿಸುವ ಕಾರ್ಯಕ್ರಮದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸಂಘಟನೆಗಳು ದೇಶದಾದ್ಯಂತ ಪಂಜಿನ ಮೆರವಣಿಗೆ ನಡೆಸುವ ಮೂಲಕ ಹಿಂದುಗಳನ್ನು ಜಾಗೃತಿಗೊಳಿಸುವ ಕೆಲಸದಲ್ಲಿ ತೊಡಗಿದೆ. ಹಿಂದೂ ಸಮಾಜವು ದೇಶವಿರೋಧಿ ಶಕ್ತಿಗಳ ಷಡ್ಯಂತರಕ್ಕೆ ಬಲಿಯಾಗದೇ ಜಾಗೃತರಾಗಬೇಕೆಂದು ಕರೆ ನೀಡಿದರು. ಕೊಡವರು ಪರಾಕ್ರಮಿಗಳು ದೇಶ ಸೇವೆಗೆ ಕೊಡವರ ಕೊಡುಗೆ ಅಪಾರವಾಗಿದೆ ಎಂದರು. ಕೊಡವರನ್ನು ಮೋಸದಿಂದ ಹತ್ಯೆ ಮಾಡಿರುವ ಟಿಪ್ಪುವನ್ನು ಹುಲಿ ಎಂದು ಬಿಂಬಿಸಿ ಆತನ ಜಯಂತಿಯನ್ನು ಮಾಡಿರುವುದು ಕೊಡವರನ್ನು ಅವಹೇಳನ ಮಾಡಿದಂತೆ ಎಂದು ಕಿಡಿಕಾರಿದರು. ಅಲ್ಲದೆ ದೇಶದ ನೈಜ ಸ್ವಾತಂತ್ರö್ಯ ಹೋರಾಟಗಾರರನ್ನು ಮರೆ ಮಾಚಿ ತಮಗೆ ಬೇಕಾದವರನ್ನು ಮಾತ್ರ ಹೋರಾಟಗಾರರಂತೆ ಬಿಂಬಿಸುವ ಮೂಲಕ ಹೋರಾಟಗಾರರ ತ್ಯಾಗವನ್ನು ಮರೆತಿರುವುದು ದುರದೃಷ್ಟಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನೆಲ್ಯಹುದಿಕೇರಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಭಾನುಪ್ರಕಾಶ್, ನೆಲ್ಯಹುದಿಕೇರಿ ಭಜರಂಗದಳದ ಸಂಚಾಲಕ ಅನೀಶ್, ಸಹ ಸಂಚಾಲಕ ಸಂಘಟನೆಯ ಪ್ರಮುಖರಾದ ವಿವೇಕ್ ರೈ, ಪಧ್ಮನಾಭ, ಸಚಿನ್, ಬೆಳ್ಳಿಯಪ್ಪ, ಶರಣ್ ಇನ್ನಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಮೃದ್ಧಿ ಪ್ರಾರ್ಥಿಸಿ, ವಿನೋದ್ ಸ್ವಾಗತಿಸಿ, ಅಂಬಿಕ ನಿರೂಪಿಸಿ, ಉಪಾಧ್ಯಕ್ಷ ಅಭಿಲಾಷ್ ವಂದಿಸಿದರು.