ಮಡಿಕೇರಿ, ಆ. ೧೨: ಮೈಂಡ್ ಅಂಡ್ ಮ್ಯಾಟರ್ ಚಾರಿಟೇಬಲ್ ಟ್ರಸ್ಟ್ ಡಿಪಾರ್ಟ್ಮೆಂಟ್ ಆಫ್ ಸೈಕಿಯಾಟ್ರಿಕ್ ಸೋಶಿಯಲ್ ವರ್ಕ್, ನಿಮ್ಹಾನ್ಸ್ನ ಸಹಯೋಗದೊಂದಿಗೆ ತಾ. ೧೬ರಿಂದ ೧೯ರವರೆಗೆ ಕೊಡಗಿನ ಹಲವಾರು ಶಾಲೆಗಳಲ್ಲಿ ಮಕ್ಕಳು, ಪೋಷಕರು ಮತ್ತು ಶಿಕ್ಷಕರಲ್ಲಿ ಮಾನಸಿಕ ಆರೋಗ್ಯ ಮತ್ತು ಅದರ ಮಹತ್ವದ ಬಗ್ಗೆ ಅರಿವು ಮೂಡಿಸಲು ಸರಣಿ ಸಮ್ಮೇಳನಗಳನ್ನು ನಡೆಸಲಾಗುತ್ತ್ತದೆ ಎಂದು ಮೈಂಡ್ ಅಂಡ್ ಮ್ಯಾಟರ್ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿಗಳಾದ ಅಚ್ಚಯ್ಯ ಹಾಗೂ ದೀಪಿಕಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಪೋಷಕರು ಮತ್ತು ಶಿಕ್ಷಕರು ಮಾನಸಿಕ ಆರೋಗ್ಯ, ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿದಿರುವುದು ಮತ್ತು ಮಕ್ಕಳ ಅಗತ್ಯತೆಗಳನ್ನು ನಿಭಾಯಿಸಲು ಸಜ್ಜುಗೊಳ್ಳುವುದು ಮುಖ್ಯವಾಗಿರುತ್ತದೆ. ಮಾನಸಿಕ ಆರೋಗ್ಯದ ಸುತ್ತಲಿನ ಕಳಂಕವನ್ನು ಮುರಿಯಲು ಮತ್ತು ಮಾನಸಿಕ ಅಸಮತೋಲನೆಯೊಂದಿಗೆ ಮೌನವಾಗಿ ಬಳಲುತ್ತಿರುವ ಜನರನ್ನು ಕರೆತಂದು ಸರಿಯಾದ ಚಿಕಿತ್ಸೆಯನ್ನು ನೀಡುವ ಗುರಿಯನ್ನು ನಾವು ಹೊಂದಿದ್ದೇವೆ.
ಪ್ರಪ್ರಥಮವಾಗಿ ನಡೆಯುತ್ತಿರುವ ಈ ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನವು ಮಕ್ಕಳ ಸಮಗ್ರ ಅಭಿವೃದ್ಧಿ, ಮಕ್ಕಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಬಹು ಆಯಾಮದ ಮಾನಸಿಕ ಸಾಮಾಜಿಕ ಅಂಶಗಳನ್ನು ಅರ್ಥಮಾಡಿಕೊಳ್ಳುವುದು. ಪೋಷಕರು, ಶಿಕ್ಷಕರು ಮತ್ತು ಶಾಲೆಯ ಪಾತ್ರ, ಪೋಷಕರು, ಶಿಕ್ಷಕರು ಮತ್ತು ಶಾಲೆಯ ಮೂಲಕ ಮಕ್ಕಳ ಮಾನಸಿಕ ಸಾಮರ್ಥ್ಯಗಳನ್ನು ವೃದ್ಧಿಸುವ ವಿಷಯಗಳ ಮೇಲೆ ನಡೆಯಲಿದೆ. ಈ ಅಭಿಯಾನವು ಕೊಡಗು ಜಿಲ್ಲೆಯಾದ್ಯಂತ ೧೭ ಸಂಸ್ಥೆಗಳಲ್ಲಿ ೨೦೦೦ ಮಕ್ಕಳು, ಪೋಷಕರು ಮತ್ತು ಶಿಕ್ಷಕರನ್ನು ತಲುಪಲಿದ್ದು, ಅಭಿಯಾನದಲ್ಲಿ ತರಬೇತಿ ನೀಡುವ ಸ್ವಯಂಸೇವಕರಿಗೆ ತಾ. ೧೪ ಮತ್ತು ೧೫ರಂದು ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಡಿಪಾರ್ಟ್ಮೆಂಟ್ ಆಫ್ ಸೈಕಿಯಾಟ್ರಿಕ್ ಸೋಶಿಯಲ್ ವರ್ಕ್, ನಿಮ್ಹಾನ್ಸ್ನ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ. ನಮ್ಮ ಮಕ್ಕಳು ಹೆಚ್ಚು ಆರೋಗ್ಯಕರ ವಾತಾವರಣದಲ್ಲಿ ವಿಶೇಷವಾಗಿ ಅವರು ತಮ್ಮ ಮನಸ್ಸಿನಲ್ಲಿ ಯಾವುದೇ ದುಗುಡ ದುಮ್ಮಾನಗಳು ಇಲ್ಲದೇ ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುವುದು ಇದರ ಗುರಿಯಾಗಿದೆ.
ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನದ ಉದ್ಘಾಟನೆಯನ್ನು ತಾ. ೧೩ ರಂದು (ಇಂದು) ಸಂಜೆ ೪ ಗಂಟೆಗೆ ಮಡಿಕೇರಿಯ ಕಾಸ್ಮೋಪಾಲಿಟನ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ವಹಿಸಲಿದ್ದಾರೆ.
ಅತಿಥಿಗಳಾಗಿ ಐಎಂಎ ಕೊಡಗು ಘಟಕದ ಅಧ್ಯಕ್ಷ ಡಾ. ಶ್ಯಾಂ ಅಪ್ಪಣ್ಣ, ಎಐಓ ಕೊಡಗು ಘಟಕದ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ, ಬೆಂಗಳೂರು ನಿಮ್ಹಾನ್ಸ್ನ ಸೈಕಿಯಾಟ್ರಿಕ್ ಸೋಶಿಯಲ್ ವರ್ಕ್ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕರಾದ ಡಾ.ಇ. ಅರವಿಂದ್ರಾಜ್ ಪಾಲ್ಗೊಳ್ಳಲಿದ್ದಾರೆ ಎಂದು ಅವರುಗಳು ತಿಳಿಸಿದರು. ಗೋಷ್ಠಿಯಲ್ಲಿ ಮೈಂಡ್ ಅಂಡ್ ಮ್ಯಾಟರ್ ಚಾರಿಟೇಬಲ್ ಟ್ರಸ್ಟ್ ಸ್ವಯಂ ಸೇವಕಿ ಕಾವ್ಯ ಪೆಮ್ಮಯ್ಯ ಉಪಸ್ಥಿತರಿದ್ದರು.