ಕುಶಾಲನಗರ, ಆ. ೧೨: ವಿಶ್ವ ಆನೆ ದಿನಾಚರಣೆ ಅಂಗವಾಗಿ ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಅರಣ್ಯ ಇಲಾಖೆ ವತಿಯಿಂದ ಸರಳ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕುಶಾಲನಗರ ಅರಣ್ಯ ವಲಯ ಅಧಿಕಾರಿ ಮತ್ತು ಸಿಬ್ಬಂದಿಗಳು ಶಿಬಿರದ ೨೭ ಆನೆಗಳಿಗೆ ಸ್ನಾನ ಮಾಡಿಸಿ, ಕಬ್ಬು, ಬಾಳೆಹಣ್ಣು ಮತ್ತಿತರ ಆಹಾರ ನೀಡುವ ಮೂಲಕ ಆರೈಕೆ ಮಾಡಿದರು.
ಇತ್ತೀಚೆಗೆ ಸುರಿದ ಮಳೆ ಹಿನ್ನೆಲೆಯಲ್ಲಿ ಶಿಬಿರ ಬಹುತೇಕ ಕೆಸರುಮಯವಾಗಿದ್ದು ಈ ಕಾರಣದಿಂದ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಮ್ ತಿಳಿಸಿದ್ದಾರೆ.
ಈ ಸಂದರ್ಭ ವನ್ಯಜೀವಿ ವಿಭಾಗದ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಮ್, ಉಪವಲಯ ಅರಣ್ಯಾಧಿಕಾರಿ ಕೆ.ಪಿ. ರಂಜನ್, ಅರಣ್ಯ ರಕ್ಷಕರು, ಮಾವುತ ಕಾವಾಡಿಗರು ಇದ್ದರು.