ಮಡಿಕೇರಿ, ಆ.೧೨; ಕಾಡಾನೆ ದಾಳಿಗೆ ಬಲಿಯಾಗಿ ಮೃತ ಪಟ್ಟ ವ್ಯಕ್ತಿಯ ಕುಂಟುAಬಕ್ಕೆ ಕೊನೆಗೂ ಅರಣ್ಯ ಇಲಾಖೆ ವತಿಯಿಂದ ಪರಿಹಾರ ಮಂಜೂ ರಾಗಿದೆ. ಘಟನೆ ನಡೆದು ಎರಡು ವರ್ಷಗಳಾದ ಬಳಿಕ ಸತತ ಪ್ರಯತ್ನ ಹಾಗೂ ‘ಶಕ್ತಿ’ ವರದಿಯ ಪರಿಣಾಮವಾಗಿ ಇದೀಗ ಪರಿಹಾರ ಮಂಜೂರು ಮಾಡಲಾಗಿದ್ದು, ಶಾಸಕರ ಕಚೇರಿಯಲ್ಲಿಂದು ಶಾಸಕ ಕೆ.ಜಿ.ಬೋಪಯ್ಯ ಅವರು ಪರಿಹಾರ ಮಂಜೂರಾತಿ ಆದೇಶ ಪತ್ರವನ್ನು ವಿತರಣೆ ಮಾಡಿದರು.
ನಾಪೋಕ್ಲು ಬಳಿಯ ಪೇರೂರು ಗ್ರಾಮದ ಮಂಜಾಟ್ ಕಾಲೋನಿ ನಿವಾಸಿ ಪಾಲೆ ಜನಾಂಗದ ಅಪ್ಪಣ್ಣ (೪೮) ಎಂಬವರು ಕಳೆದ ತಾ. ೨೭.೧೨.೨೦೨೦ ರಂದು ಮುಂಜಾವು ೧.೩೦ ಗಂಟೆಗೆ ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದರು. ಮರುದಿನ ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಸ್ಥಳ ಮಹಜರು ಮಾಡಿ ರೂ.೧ ಲಕ್ಷ ತುರ್ತು ಪರಿಹಾರ ನೀಡಿದ್ದರು. ನಂತರದಲ್ಲಿ ಮತ್ತೆ ಒಂದು ಲಕ್ಷ ನೀಡಲಾಗಿತ್ತು. ಇನ್ನುಳಿದ ರೂ.೫.೫೦ ಲಕ್ಷ ಪರಿಹಾರವನ್ನು ತಡೆ ಹಿಡಿಯಲಾಗಿತ್ತು. ಅಪ್ಪಣ್ಣ ಅವರ ಪತ್ನಿ ಸರೋಜ ಅವರಿಗೆ ಶಿಫಾರಸ್ಸು ಮಾಡಲಾಗಿದ್ದ ಮಾಸಾಶನವನ್ನೂ ತಡೆ ಹಿಡಿಯಲಾಗಿತ್ತು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆನೆ ದಾಳಿಯಿಂದಾಗಿ ಸಾವನ್ನಪ್ಪಿರುವದಾಗಿ ಸ್ಪಷ್ಟವಾಗಿ ನಮೂದಿಸಿಲ್ಲ; ಮದುವೆ ಮನೆಯಲ್ಲಿ ಹೊಡೆದಾಡಿಕೊಂಡು ಸತ್ತಿರುವದಾಗಿ ಹೇಳುತ್ತಿದ್ದಾರೆ ಎಂಬ ನೆಪವೊಡ್ಡಿ ತಡೆ ಹಿಡಿಯಲಾಗಿತ್ತು.
ಈ ಪ್ರಕರಣದ ಬಗ್ಗೆ ‘ಶಕ್ತಿ’ ಯಲ್ಲಿ ೧೬.೫.೨೦೨೨ರಂದು ‘ಜೀವ ಹೋಗಿ ಎರಡು ವರ್ಷ ಕಳೆದರೂ ದೊರಕದ ಪರಿಹಾರ’ ಎಂಬ ಶೀರ್ಷಿಕೆಯಡಿ ಸಮಗ್ರ ವರದಿಯೊಂದಿಗೆ ಅಧಿಕಾರಿಗಳಿಗೂ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ಇದೀಗ ಅರಣ್ಯ ಇಲಾಖೆಯಿಂದ ಉಳಿದ ರೂ.೫.೫೦ ಲಕ್ಷ ಪರಿಹಾರ ಮಂಜೂರು ಮಾಡಿದ್ದು, ಶಾಸಕ ಕೆ.ಜಿ. ಬೋಪಯ್ಯ ಅವರು ತಮ್ಮ ಕಚೇರಿಯಲ್ಲಿಂದು ಮೃತರ ಪತ್ನಿ ಸರೋಜ ಅವರಿಗೆ ಮಂಜೂರಾತಿ ಪತ್ರ ವಿತರಣೆ ಮಾಡಿದರು. ಪರಿಹಾರ ಹಣ ನೇರವಾಗಿ ಸರೋಜ ಅವರ ಬ್ಯಾಂಕ್ ಖಾತೆಗೆ ಸಂದಾಯವಾಗಲಿದೆ.
? ಕುಡೆಕಲ್ ಸಂತೋಷ್