ಮಡಿಕೇರಿ, ಆ. ೧೨: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತದ ದಿನಗಳಲ್ಲಿ ಹಲವು ರೀತಿಯ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಲವು ಮುಂಜಾಗ್ರತಾ ಕ್ರಮವನ್ನು ಅನುಸರಿಸಲು ಮುಂದಾಗಿದೆ. ದೇಶದ ಸಂವಿಧಾನಕ್ಕೆ ವಿರುದ್ಧವಾಗಿ ಅಕ್ರಮವಾಗಿ ಕೆಲವು ವಿದೇಶಿಯರು ಜಿಲ್ಲೆಯಲ್ಲಿ ನೆಲೆಕಂಡಿರುವ ಬಗ್ಗೆ ಸಂಶಯಗಳಿರುವ ಹಿನ್ನೆಲೆಯಲ್ಲಿ ಅಕ್ರಮ ವಿದೇಶಿಗರ ಪತ್ತೆ ಕಾರ್ಯ ಮತ್ತು ಮಾಹಿತಿ ಸಂಗ್ರಹ ನಡೆಸಲಾಗುತ್ತಿದೆ. ಇದರೊಂದಿಗೆ ಅನ್ಯ ರಾಜ್ಯಗಳಿಂದ ಆಗಮಿಸಿರುವ ಕಾರ್ಮಿಕರ ಕುರಿತಾಗಿಯೂ ವಿವರಗಳನ್ನು ಸಂಗ್ರಹಿಸುವ ಕೆಲಸಕ್ಕೆ ಇಲಾಖೆ ಕಾಳಜಿ ವಹಿಸಿದೆ.
ಇದರಂತೆ ಕೆಲವು ದಿನಗಳ ಹಿಂದೆ ಬೆಳೆಗಾರರ ಸಂಘಟನೆ ಸೇರಿದಂತೆ ವಿವಿಧ ಸಂಘಗಳ ಸಮನ್ವಯ ಸಭೆಯೊಂದನ್ನು ನಡೆಸಲಾಗಿದ್ದು, ಪ್ರಮುಖರಿಂದಲೂ ಸಲಹೆಗಳನ್ನು ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಅವರು ತಿಳಿಸಿದ್ದಾರೆ.
ಎಲ್ಲಿ ಎಲ್ಲಿ ಅಕ್ರಮ ವಲಸಿಗರು ಅಥವಾ ಪರ ರಾಜ್ಯದ ಕಾರ್ಮಿಕರು ಇರಬಹುದು ಎಂಬದನ್ನು ಗುರುತಿಸುವ ಪ್ರಯತ್ನ ನಡೆದಿದೆ. ಕಾಫಿ ತೋಟಗಳು, ರೆಸಾರ್ಟ್ಗಳು, ಹೋಂಸ್ಟೇ, ಬಾರ್ ಅಂಡ್ ರೆಸ್ಟೋರೆಂಟ್, ಹೊಟೇಲ್ಗಳು, ಕಟ್ಟಡ ನಿರ್ಮಾಣ ಕೆಲಸ, ಕೈಗಾರಿಕಾ ಸಂಸ್ಥೆಗಳಿರುವ ಸ್ಥಳ ಈ ರೀತಿಯಾಗಿ ಗಮನ ಹರಿಸಲಾಗುತ್ತಿದೆ. ಇದರ ಮಾಲೀಕರುಗಳಿಗೆ ತಮ್ಮಲ್ಲಿ ಕೆಲಸ ಮಾಡುತ್ತಿರುವವರ ಫೋಟೋ, ಆಧಾರ್ಕಾರ್ಡ್ನಂತಹ ದಾಖಲೆಗಳ ಪ್ರತಿಗಳನ್ನು ಸಂಗ್ರಹಿಸಿಕೊಳ್ಳುವAತೆ ಹಾಗೂ ಇದನ್ನು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ಪೊಲೀಸರಿಗೆ ಅಥವಾ ಠಾಣೆಗೆ ತಲುಪಿಸುವಂತೆ ಸೂಚಿಸಲಾಗಿದೆ.
ಇದಲ್ಲದೆ ಪೊಲೀಸ್ ಸಿಬ್ಬಂದಿಗಳೂ ಕೂಡ ವಿವಿಧ ಪ್ರದೇಶಗಳಿಗೆ ತೆರಳಿ ಮಾಹಿತಿ ಕಲೆ ಹಾಕಲು ಕ್ರಮವಹಿಸಲಾಗಿದೆ. ಮೂರು ಪೊಲೀಸ್ ಉಪವಿಭಾಗಗಳಲ್ಲಿರುವ ದೊಡ್ಡ ವಿಸ್ತೀರ್ಣದ ತೋಟಗಳು ಸೇರಿದಂತೆ
(ಮೊದಲ ಪುಟದಿಂದ) ಅಗತ್ಯವಿರುವೆಡೆ ಮೊದಲ ಆದ್ಯತೆ ವಹಿಸಲಾಗುತ್ತಿದೆ. ಈಗಾಗಲೇ ಹಲವಷ್ಟು ಮಂದಿಯ ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, ಇದರ ಸತ್ಯಾ ಸತ್ಯತೆಗಳನ್ನು ಅರಿಯುವ ಕೆಲಸ ಇಲಾಖೆ ಮೂಲಕ ನಡೆಯುತ್ತಿದೆ ಎಂದು ಎಸ್ಪಿ ಅಯ್ಯಪ್ಪ ತಿಳಿಸಿದರು.
ಪೊಲೀಸ್ ಇಲಾಖೆ ಕಟ್ಟೆಚ್ಚರಿಂದ ಇರುವದು ಸೇರಿದಂತೆ ಅಪರಾಧ ಪ್ರಕರಣಗಳು ನಡೆಯದಂತೆ ತಡೆಯುವತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯ ಜನತೆಯ ಸಹಕಾರ ಹಾಗೂ ಸಂಬAಧಿಸಿದ ಸಂಘ - ಸಂಸ್ಥೆ, ಉದ್ದಿಮೆಗಳ ಸಹಕಾರವನ್ನು ಇಲಾಖೆ ಬಯಸುತ್ತದೆ ಎಂದು ಅವರು ಹೇಳಿದರು. ಭಾರತೀಯ ನಾಗರೀಕರಲ್ಲದವರು, ಪರರಾಜ್ಯದವರಿಂದ ನಡೆಯುತ್ತಿರುವ ಅಪರಾಧಗಳ ತಡೆ ಮಾತ್ರವಲ್ಲ ಜಿಲ್ಲೆಯೊಳಗೂ ಕೂಡ ಆಂತರಿಕವಾಗಿ ನಡೆಯುತ್ತಿರುವ ಕೃತ್ಯಗಳನ್ನು ಮಟ್ಟ ಹಾಕುವದೂ ಇಲಾಖೆಯ ಚಿಂತನೆಯಾಗಿದೆ.
ಇದು ಜಿಲ್ಲೆಯಲ್ಲಿ ನಿರಂತರವಾಗಿ ಮುಂದುವರಿಯುವ ಪ್ರಕ್ರಿಯೆಯಾಗಿದೆ. ವಿವಿಧೆಡೆ ಸಾರ್ವಜನಿಕವಾಗಿಯೂ ಆಯಾ ಪೊಲೀಸ್ ಠಾಣೆಯ ವತಿಯಿಂದ ಗ್ರಾ.ಪಂ. ಸಹಕಾರದೊಂದಿಗೆ ಸಭೆಗಳನ್ನೂ ನಡೆಸಲಾಗುವುದು. ಈಗಾಗಲೇ ಈ ಕಾರ್ಯ ಜಿಲ್ಲೆಯಲ್ಲಿ ನಡೆಯುತ್ತಿರುವದಾಗಿ ಅಯ್ಯಪ್ಪ ಅವರು ವಿವರವಿತ್ತರು.