ಕಣಿವೆ, ಆ. ೧೦ : ತಾಲೂಕು ಕೇಂದ್ರ ಕುಶಾಲನಗರ ಪಟ್ಟಣದ ಗುಂಡೂರಾವ್ ಬಡಾವಣೆಯ ಕಿತ್ತು ನಿಂತ ರಸ್ತೆಯ ಸಮಗ್ರ ಅಭಿವೃದ್ಧಿಗೆ ೩೦ ಲಕ್ಷ ರೂ.ಗಳನ್ನು ಮಂಜೂರು ಮಾಡಿ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಆದೇಶಿಸಿದ್ದಾರೆ.

ಕುಶಾಲನಗರದಲ್ಲಿ ನಡೆದ ಐಡಿಎಸ್ ಎಂಟಿ ಸಭೆಯಲ್ಲಿ ಕಿತ್ತು ನಿಂತು ವಾಹನ ಹಾಗೂ ಜನರ ಸಂಚಾರಕ್ಕೆ ಸಮಸ್ಯೆಯಾಗಿರುವ ಗುಂಡೂರಾವ್ ಬಡಾವಣೆಯ ರಸ್ತೆಯನ್ನು ೩೦ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಡಾಂಬರು ರಸ್ತೆಯಾಗಿ ಅಭಿವೃದ್ಧಿಪಡಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಮಳೆ ಮುಗಿದ ತಕ್ಷಣ ಕಾಮಗಾರಿ ಮಾಡಿ ಮುಗಿಸುವುದಾಗಿ ಸಭೆಯಲ್ಲಿದ್ದ ಪಂಚಾಯಿತಿ ಅಧ್ಯಕ್ಷ ಜಯವರ್ಧನ ಜಿಲ್ಲಾಧಿಕಾರಿಗಳಿಗೆ ಹೇಳಿದರು.

ರಸ್ತೆಯ ಅಧೋಗತಿಯ ಬಗ್ಗೆ ಇತ್ತೀಚೆಗಷ್ಟೆ ‘ಶಕ್ತಿ’ ಸಚಿತ್ರ ವರದಿ ಪ್ರಕಟಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಪಂಚಾಯಿತಿ ಅಧಿಕಾರಿಗಳು ಕಿತ್ತು ನಿಂತು ಗುಂಡಿ ಬಿದ್ದ ರಸ್ತೆಗೆ ತಾತ್ಕಾಲಿಕವಾಗಿ ಜಲ್ಲಿ ಕಲ್ಲು ಹಾಕಿದ್ದರು.

ಇದೀಗ ಶಾಶ್ವತವಾದ ಡಾಂಬರು ರಸ್ತೆಯಾಗಿ ಈ ರಸ್ತೆ ಪರಿವರ್ತನೆಯಾಗುತ್ತಿದೆ.