ಮಡಿಕೇರಿ, ಆ. ೧೧: ‘‘ಸಹಕಾರಿಗಳಿಗೆ ಕೈ ಜೋಡಿಸ ಬೇಕಾದವರು ಕೈ ಚಾಚುತ್ತಿದ್ದಾರೆಯೇ?’’ ಎನ್ನುವ ‘ನಿಮ್ಮೊಂದಿಗೆ’ ವಿಭಾಗದ ವರದಿಗೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ; ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಹೆಚ್.ಎನ್. ರಮೇಶ್ ಮತ್ತು ಸಹಾಯಕ ನಿಬಂಧಕ ಎಂ.ಇ. ಮೋಹನ್ ಅವರುಗಳು ಈ ಕೆಳಗಿನಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ:-
ಜಿಲ್ಲೆಯ ಸಹಕಾರಿ ಇಲಾಖೆಯಲ್ಲಿ ಸಹಕಾರ ಸಂಘಗಳ ಯಾವುದೇ ಕೆಲಸಗಳಿಗೆ ಆದ್ಯತೆ ನೀಡಿ ಗಮನ ಹರಿಸಲಾಗುತ್ತಿದೆ. ವರದಿಯಲ್ಲಿ ಬಂದAತೆ ಬೈಲಾ ಅನುಮೋದನೆ ವೃಂದಬಲ ಮಂಜೂರಾತಿ ಇತ್ಯಾದಿ ಕೆಲಸಗಳು ಕೇವಲ ಸೆಪ್ಟೆಂಬರ್ ತಿಂಗಳಿನಲ್ಲಿ ಆಗುವಂತಹುದು. ತಾನು ೨ ತಿಂಗಳ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಹೆಚ್ಚುವರಿಯಾಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಹಂಗಾಮಿ ಸಿಇಓ ಕೆಲಸ ಮಾಡುತ್ತಿದ್ದೇನೆ ಎಂದು ರಮೇಶ್ ತಿಳಿಸಿದರು. ಹೀಗಾಗಿ ತನ್ನ ಆಡಳಿತಕ್ಕಿಂತ ಹಿಂದೆ ಏನಾಗಿದೆ ಎಂಬುದು ಗೊತ್ತಿಲ್ಲ. ಕಟ್ಟಡ ನಿರ್ಮಾಣ ಅನುಮತಿ ವಿಚಾರದಲ್ಲಿಯೂ ರೂ. ೫೦ ಲಕ್ಷಕ್ಕಿಂತ ಮೇಲ್ಪಟ್ಟು ಮೈಸೂರು ವಿಭಾಗದ ಅನುಮತಿ ಬೇಕಾಗಿದೆ. ರೂ. ೧ ಕೋಟಿಗೂ ಮಿಗಿಲಾದ ಕಟ್ಟಡ ನಿರ್ಮಾಣಕ್ಕೆ ಸರಕಾರವೇ ನೀಡಬೇಕಾಗಿದೆ. ಸಾಮಾನ್ಯವಾಗಿ ರೂ. ೫೦ ಲಕ್ಷಕ್ಕಿಂತ ಕಡಿಮೆ ಕಟ್ಟಡ ನಿರ್ಮಾಣ ಜಿಲ್ಲೆಯಲ್ಲಿ ಆಗುತ್ತಿಲ್ಲ. ಈ ಬಗ್ಗೆಯೂ ಕೆಲವರು ಆರೋಪಿಸಿರುವುದು ಆಶ್ಚರ್ಯಕರ.
ಇಷ್ಟಾಗಿ ಜಿಲ್ಲಾ ಉಪನಿಬಂಧಕರ ಕಚೇರಿಯಲ್ಲಿ ೧೭ ಸಿಬ್ಬಂದಿ ಇರಬೇಕಿದ್ದು, ಕೇವಲ ಓರ್ವ ಇನ್ಸ್ಪೆಕ್ಟರ್ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಸಿಬ್ಬಂದಿ ಕೊರತೆಯಿದೆ. ಹೀಗಾಗಿ ಏನಿದ್ದರೂ, ನೇರವಾಗಿ ತಮ್ಮ ಗಮನಕ್ಕೆ ಬರುತ್ತದೆ ಎಂದು ರಮೇಶ್ ವಿವರಿಸಿದ್ದಾರೆ.
ಇತ್ತೀಚಿನ ಬೆಳವಣಿಗೆಯಲ್ಲಿ ಕೆಲವೊಂದು ಕಟ್ಟುನಿಟ್ಟಿನ ಕಾನೂನನ್ನು ಜಾರಿಗೊಳಿಸಲಾಗುತ್ತಿದೆ. ಅನೇಕರು ೬೦ ವರ್ಷದ ಬಳಿಕವೂ ನಿವೃತ್ತರಾಗಿದ್ದರೂ, ತಮ್ಮ ಪ್ರಭಾವದಿಂದ ಕೆಲಸದಲ್ಲಿ ಮುಂದುವರೆದಿದ್ದಾರೆ. ಅಂತಹವರು ಯಾವುದೇ ಸಂಘಗಳ ಆಂತರಿಕ ಲೆಕ್ಕಪರಿಶೋಧನೆ ಮಾಡುವಂತಿಲ್ಲ. ಆದರೆ, ಕೆಲವು ಸಂಘಗಳ ಆಡಳಿತ ಮಂಡಳಿಗಳು ಅಂತವರಿAದ ಲೆಕ್ಕಪರಿಶೋಧನೆ ಮಾಡಲು ನೇಮಕಗೊಳಿಸಿದಾಗ, ಇಲಾಖೆಯಿಂದ ಅದಕ್ಕೆ ತಡೆಯೊಡ್ಡಲಾಗಿದೆ. ಅದೇ ರೀತಿ ಕೆಲವು ಸಿಬ್ಬಂದಿ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾಗ ಅಂತವಹರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗೆ ಕೆಲವರಿಗೆ ಇಲಾಖಾ ಆಡಳಿತದ ಕುರಿತು ಆಕ್ರೋಶವಿದ್ದು, ಅಂತಹವರೇನಾದರೂ ಈ ಆರೋಪ ಮಾಡಿರಬಹುದು. ಸಹಕಾರಿ ರಂಗದಲ್ಲಿ ಯಾವುದೇ ಸಂಘಗಳ ನ್ಯಾಯಯುತ ಕೆಲಸಗಳಿಗೆ ಯಾರಾದರೂ ವಿಳಂಬ ಮಾಡಿದಲ್ಲಿ ತಮ್ಮ ಗಮನಕ್ಕೆ ತಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪನಿಬಂಧಕರು ‘ಶಕ್ತಿ’ಯೊಂದಿಗೆ ಮುಕ್ತ ನುಡಿಯಾಡಿದ್ದಾರೆ.