ಮಡಿಕೇರಿ, ಆ. ೧೧: ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಕೊಡಗು ಶಾಖೆ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಮಡಿಕೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಾಲ್ದಾರೆ, ಗ್ರಾಮ ಪಂಚಾಯಿತಿ ಮಾಲ್ದಾರೆ, ಲಯನ್ಸ್ ಸಂಸ್ಥೆ ಸಿದ್ದಾಪುರ, ಅಂಬೇಡ್ಕರ್ ಸೇನೆ ಕೊಡಗು, ಜನಪರ ಸಂಘಟನೆ ಮಾಲ್ದಾರೆ, ಯೂತ್ ಹುಂಡಿ ಹಾಗೂ ವಿವಿಧ ಸಂಘ-ಸAಸ್ಥೆಗಳ ಸಹಯೋಗದೊಂದಿಗೆ ಮಾಲ್ದಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಸಿದ್ದಾಪುರ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಥೋಮಸ್ ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಸಮುದಾಯ ಆಧಾರಿತ ಕಾರ್ಯಕ್ರಮದ ಹಿರಿಯ ವ್ಯವಸ್ಥಾಪಕ ವೆಂಕಟಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆಯನ್ನು ಮನಗಂಡು ಸೂಕ್ತ ಸಮಯದಲ್ಲಿ ರಕ್ತದ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹಾಗೂ ಗಿರಿಜನ ಮಹಿಳೆಯರಲ್ಲಿ ಕಂಡುಬರುವ ರಕ್ತಹೀನತೆ ಹಿನ್ನಲೆಯಲ್ಲಿ ಜಿಲ್ಲಾವಾರು ಮತ್ತು ತಾಲೂಕುವಾರು ರಕ್ತದಾನ ಶಿಬಿರವನ್ನು ಆಯೋಜಿಸ ಲಾಗುತ್ತಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಕ್ತನಿಧಿ ಕೇಂದ್ರದ ವೈಧ್ಯಾಧಿಕಾರಿ ಡಾ. ಕರುಂಬಯ್ಯ ಮಾತನಾಡಿ, ಒಬ್ಬರು ರಕ್ತದಾನ ಮಾಡಿದರೆ, ಇದರಿಂದ ಮೂರು ಜನರಿಗೆ ಉಪಯೋಗವಾಗುತ್ತದೆ. ಪುರುಷರು ಮೂರು ತಿಂಗಳಿಗೆ ಒಂದು ಬಾರಿ ಹಾಗೂ ಮಹಿಳೆಯರು ನಾಲ್ಕು ತಿಂಗಳಿಗೆ ಒಂದು ಬಾರಿ ರಕ್ತದಾನ ಮಾಡಬಹುದೆಂದು ತಿಳಿಸಿದರು.
ಮತ್ತೊರ್ವ ಮುಖ್ಯ ಅತಿಥಿ ಮಾಲ್ದಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಮಹಮ್ಮದ್ ಮೊಯಿನುದ್ದಿನ್ ಮಾತನಾಡಿ, ರಕ್ತಕ್ಕೆ ಪರ್ಯಾಯ ವ್ಯವಸ್ಥೆಯಿಲ್ಲ. ರಕ್ತ ಅತ್ಯಮೂಲ್ಯವಾದದ್ದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ರಕ್ತದಾನ ಶಿಬಿರವು ತುರ್ತು ಸಂದರ್ಭದಲ್ಲಿ ಅಗತ್ಯವಿರುವವರಿಗೆ ರಕ್ತ ನೀಡಲು ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ೪೭ ರಕ್ತದಾನಿಗಳು ಭಾಗವಹಿಸಿದ್ದು, ೪೪ ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಸತೀಶ್, ಜನಪರ ಸಂಘಟನೆಯ ಅಧ್ಯಕ್ಷ ಮಂಜು, ಚಿತ್ರ ಕಲಾವಿದ ಭಾವ, ಮಾಲ್ದಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಲಯನ್ಸ್ ಸಂಸ್ಥೆಯ ಸದಸ್ಯರು, ಮಡಿಕೇರಿ ರಕ್ತನಿಧಿ ಕೇಂದ್ರದ ಸಿಬ್ಬಂದಿ ವರ್ಗದವರು, ಎಸ್.ವಿ.ವೈ.ಎಂ. ಸಂಸ್ಥೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಅಂಕಾಚಾರಿ ಹಾಗೂ ಬಸಪ್ಪ, ಇತರೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.