ಸೋಮವಾರಪೇಟೆ, ಆ. ೧೧: ತೋಟಗಾರಿಕಾ ಇಲಾಖೆಯಿಂದ ನೀಡಲಾಗುವ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಕೃಷಿಕರು ಆರ್ಥಿಕ ಪ್ರಗತಿ ಸಾಧಿಸಬೇಕೆಂದು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಇಲ್ಲಿನ ತೋಟಗಾರಿಕಾ ಇಲಾಖೆ ವತಿಯಿಂದ ಬೇಳೂರು ಸಸ್ಯ ಕ್ಷೇತ್ರದಲ್ಲಿ ಆಯೋಜಿಸಿದ್ದ ತೋಟಗಾರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಫಲಾನುಭವಿಗಳಿಗೆ ವಿವಿಧ ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು. ಸರ್ಕಾರವು ತೋಟಗಾರಿಕಾ ಇಲಾಖೆಯ ಮೂಲಕ ಅನೇಕ ಸವಲತ್ತುಗಳನ್ನು ಒದಗಿಸುತ್ತಿದ್ದು, ಕೃಷಿಕರು ಈ ಬಗ್ಗೆ ಮಾಹಿತಿ ಪಡೆದು ಕೊಂಡು ಸವಲತ್ತು ಹೊಂದಿ ಕೊಳ್ಳಬೇಕು. ಸೋಮವಾರಪೇಟೆ ತೋಟಗಾರಿಕಾ ಇಲಾಖೆಯಿಂದ ಉತ್ತಮ ಗುಣಮಟ್ಟದ ಗಿಡಗಳನ್ನು ವಿತರಿಸಲಾಗುತ್ತಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ರಂಜನ್ ಹೇಳಿದರು.

ಇದೇ ಸಂದರ್ಭ ರಾಷ್ಟಿçÃಯ ತೋಟಗಾರಿಕಾ ಮಿಷನ್ ಯೋಜನೆಯ ಪುನಶ್ಚೇತನ ಕಾರ್ಯ ಕ್ರಮದ ರೈತ ಫಲಾನುಭವಿಗಳಿಗೆ ಕಾಳುಮೆಣಸು, ಕಿತ್ತಳೆ ಗಿಡಗಳನ್ನು ವಿತರಿಸಲಾಯಿತು. ಕ್ಷೇತ್ರದ ಸಸ್ಯಾಭಿವೃದ್ಧಿ ಘಟಕವನ್ನು ವೀಕ್ಷಿಸಿದ ಶಾಸಕರು ಇಲಾಖಾಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಡಾ. ಮಂಜುನಾಥ ಜೆ. ಶೆಟ್ಟಿ, ತೋಟಗಾರಿಕಾ ಸಹಾಯಕ ಕೆ. ಹೇಮರಾಜು, ಬೇಳೂರು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್, ಸದಸ್ಯರಾದ ಸುಧಾ, ಪುಷ್ಪಾವತಿ, ಪಿಡಿಓ ಅಂಜನಾದೇವಿ, ಸಿಬ್ಬಂದಿ ರಷೀದ್, ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.