ವೀರಾಜಪೇಟೆ, ಆ. ೧೦: ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಗರದ ಹಿಂದೂ ಮಲಯಾಳಿ ಅಸೋಸಿಯೇಷನ್ ವೀರಾಜಪೇಟೆ ವತಿಯಿಂದ ನಗರದಲ್ಲಿ ತಾ. ೧೫ ರಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಸೋಸಿಯೇಷನ್ ಅಧ್ಯಕ್ಷ ಎ. ವಿನೂಪ್ ಕುಮಾರ್ ಮಾತನಾಡಿ, ರಕ್ತದಾನವು ಮಹತ್ವವಾದ ದಾನವಾಗಿದೆ. ಕೋವಿಡ್ ಸಂದರ್ಭ ಅನೇಕ ಮಂದಿ ರೋಗಿಗಳಿಗೆ ಸೂಕ್ತ ರಕ್ತ ದೊರಕದೆ ಸಂಕಷ್ಟಕ್ಕೆ ಒಳಗಾಗಿದ್ದರು. ಜಿಲ್ಲೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಅಭಾವವಿತ್ತು. ತುರ್ತು ಸಂದರ್ಭ ರಕ್ತ ದೊರಕದೆ ರೋಗಿಗಳು ಮರಣಕ್ಕೆ ತುತ್ತಾಗಿರುವುದನ್ನು ಮನಗಂಡು ತಾ. ೧೫ ರಂದು ನಗರದ ಪುರಭವನದ ಸಭಾಂಗಣದಲ್ಲಿ ಒಂದು ದಿನದ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದ್ದು, ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಸಂಸ್ಥೆಯ ಕಾರ್ಯದರ್ಶಿ ಶಾಜು ಮೋನ್ ಮಾತನಾಡಿ, ತಾ. ೧೫ ರಂದು ಬೆಳಿಗ್ಗೆ ೯ ರಿಂದ ಆರಂಭವಾಗಿ ಮಧ್ಯಾಹ್ನ ೧ ಗಂಟೆಗೆ ರಕ್ತದಾನ ಶಿಬಿರ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸಿ.ಎಂ. ದಿನೇಶ್ ನಂಬಿಯಾರ್, ಸಹ ಕಾರ್ಯದರ್ಶಿ ಉನ್ನಿ ಬಿ., ಖಾಜಾಂಚಿ ಸುನೀಲ್ ಕುಮಾರ್ ಡಿ.ಕೆ., ನಿರ್ದೇಶಕರುಗಳಾದ ಸುಮೇಶ್ ಕೆ.ಬಿ. ಮತ್ತು ಸಂತೋಷ್ ಆರ್. ಹಾಜರಿದ್ದರು.