ಮಡಿಕೇರಿ, ಆ. ೧೧: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಸಿಐಟಿಯು ವತಿಯಿಂದ ತಾ. ೧೪ ರಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ. ತಾ. ೧೬ ರಿಂದ ಅಡುಗೆ ಕೆಲಸವನ್ನು ಸ್ಥಗಿತಗೊಳಿಸಿ ಹೋರಾಟ ಮುಂದುವರಿಸಲಾಗುತ್ತದೆ ಎಂದು ಸಿಐಟಿಯು ಕಾರ್ಯದರ್ಶಿ ಎ.ಸಿ. ಸಾಬು, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕೆ.ಎ. ಪ್ರಮೀಳಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
೬೦ ವರ್ಷದ ಬಿಸಿಯೂಟ ನೌಕರರನ್ನು ಕೆಲಸದಿಂದ ಬಿಡಗಡೆಗೊಳಿಸುವಾಗ ನಿವೃತ್ತಿ ವೇತನ ಅಥವಾ ಇಡಿಗಂಟು ನೀಡಿ ಬಿಡುಗಡೆ ಮಾಡಬೇಕು. ಮಾರ್ಚ್ ೩೧, ೨೦೨೨ಕ್ಕೆ ಬಿಸಿಯೂಟ ನೌಕರರನ್ನು ಬಿಡುಗಡೆಗೊಳಿಸಲು ಹೊರಡಿಸಿರುವ ಸುತ್ತೋಲೆಯನ್ನು ಬದಲಾಯಿಸಿ ಏಪ್ರಿಲ್ ೧೦, ೨೦೨೨ಕ್ಕೆ ಮರು ಆದೇಶ ನೀಡಬೇಕು. ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ ಹೆಚ್ಚಳ ಮಾಡಿದ ರೂ. ೧೦೦೦ ವೇತನವನ್ನು ಜನವರಿ ೨೦೨೨ ರಿಂದ ಅನ್ವಯಿಸಿ ಜಾರಿ ಮಾಡಬೇಕು.
ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಈ ನೌಕರರಿಗೂ ಗ್ರಾಚ್ಯುಟಿಯನ್ನು ಕೂಡಲೇ ಜಾರಿಮಾಡಬೇಕು, ಬಿಸಿಯೂಟ ಯೋಜನೆಯನ್ನು ಖಾಯಂ ಮಾಡಬೇಕು. ಖಾಯಂ ಮಾಡುವ ತನಕ ೪೫ ಮತ್ತು ೪೬ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಇವರನ್ನು ಕಾರ್ಮಿಕರೆಂದು ಗುರುತಿಸಬೇಕು. ಕೇಂದ್ರೀಕೃತ ಅಡುಗೆ ಕೇಂದ್ರ ಮಾದರಿ ಬೇಡ. ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು. ನಮ್ಮ ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಶಿಫಾರಸ್ಸಿನಂತೆ ೬೦೦೦ ರೂ. ಮತ್ತು ೫೦೦೦ ರೂ. ಹೆಚ್ಚಳ ಮಾಡಬೇಕು, ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ನೀಡಬೇಕು. ಎಲ್ಲರಿಗೂ ಅನ್ವಯವಾಗದೇ ಇರುವ ಮಾನ್ - ಧನ್ ಯೋಜನೆ ಮಾಡಿಸಲು ಇಲಾಖೆಯಿಂದ ಒತ್ತಾಯಿಸಬಾರದು. ಶಾಲಾ ಅವಧಿಯ ನಂತರ ನರೇಗಾ ಯೋಜನೆಯಡಿ ಶಾಲಾ ಕೈತೋಟದ ಕೆಲಸಗಳನ್ನು ನೀಡಿ ಈ ಯೋಜನೆಯಿಂದ ವೇತನ ನೀಡಬೇಕು. ಬಿಸಿಯೂಟ ನೌಕರರನ್ನು ಖಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ಜಾರಿ ಮಾಡಬೇಕು, ಬಿಸಿಯೂಟ ನೌಕರರಿಗೆ ಪ್ರತಿ ತಿಂಗಳು ೫ನೇ ತಾರೀಕಿನ ಒಳಗೆ ವೇತನ ಪಾವತಿಯಾಬೇಕು, ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು, ಪ್ರತಿಶಾಲೆಯಲ್ಲಿ ಕನಿಷ್ಟ ೨ ಜನ ಅಡುಗೆಯವರು ಇರಲೇಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ಮಾಡಲಾಗುತ್ತದೆ ಎಂದು ಅವರುಗಳು ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಅಕ್ಷರದಾಸೋಹ ನೌಕರರ ಜಿಲ್ಲಾ ಸಮಾವೇಶ ಸಿಐಟಿಯು ನೇತೃತ್ವದಲ್ಲಿ ತಾ. ೧೪ ರಂದು ಬೆಳಿಗ್ಗೆ ೧೦ ಗಂಟೆಗೆ ಬಾಲಭವನದಲ್ಲಿ ನಡೆಯಲಿದೆ ಎಂದು ಸಂಘದ ಖಜಾಂಚಿ ಪಿ.ಎಂ. ಕಾವೇರಿ, ಕಾರ್ಯದರ್ಶಿ ಹೆಚ್.ಸಿ. ಕುಸುಮ ತಿಳಿಸಿದರು.