ಸೋಮವಾರಪೇಟೆ, ಆ.೧೧: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿ ಚಿಕ್ಕದಾಗಿದ್ದರೂ ಚೊಕ್ಕವಾಗಿ ಇಟ್ಟುಕೊಳ್ಳುವಲ್ಲಿ ಪಂಚಾಯಿತಿ ಆಡಳಿತ ವಿಫಲವಾಗುತ್ತಿದ್ದು, ಪಟ್ಟಣದ ಬಹುತೇಕ ವಾರ್ಡ್ಗಳ ಚರಂಡಿಯಲ್ಲಿ ತ್ಯಾಜ್ಯ ಶೇಖರಣೆಯಾಗಿ ಮಳೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ.
ರಸ್ತೆಯ ಮೇಲೆ ಹರಿಯುವ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದ್ದು, ವಾರ್ಡ್ ನಿವಾಸಿಗಳು ಪಂಚಾಯಿತಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ತಾವುಗಳೇ ಚರಂಡಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆಗಾಲಕ್ಕೂ ಮುನ್ನವೇ ಚರಂಡಿಗಳನ್ನು ದುರಸ್ತಿಪಡಿಸಿ ಮಳೆ ನೀರಿನ ಸರಾಗ ಹರಿವಿಗೆ ಚಿಂತನೆ ನಡೆಸಬೇಕಿದ್ದ ಪಟ್ಟಣ ಪಂಚಾಯಿತಿ ಆಡಳಿತ ಹಾಗೂ ಅಧಿಕಾರಿಗಳು ನಿರ್ಲಕ್ಷö್ಯ ತೋರಿದ್ದರ ಪರಿಣಾಮ ಇದೀಗ ಕೊಳಚೆ ನೀರು ಮನೆಗಳಿಗೆ ಹರಿದು ಬರುತ್ತಿದೆ ಎಂದು ೭ನೇ ವಾರ್ಡ್ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೇಂಜರ್ ಬ್ಲಾಕ್‌ನಿಂದ ಜನತಾ ಕಾಲೋನಿಗೆ ತೆರಳುವ ಇಳಿಜಾರು ರಸ್ತೆಯ ಚರಂಡಿ ಹಲವು ದಿನಗಳಿಂದ ಕಟ್ಟಿಕೊಂಡಿದ್ದು, ಈ ಬಗ್ಗೆ ಪಂಚಾಯ್ತಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದೀಗ ಮಳೆ ನೀರು ಮನೆಗಳಿಗೆ ನುಗ್ಗಲಾರಂಭಿಸಿದೆ ಎಂದು ಆರೋಪಿಸಿರುವ ನಿವಾಸಿಗಳು, ತಾವುಗಳೇ ಗುದ್ದಲಿ ಹಿಡಿದು ಚರಂಡಿಯ ಕಸಕಡ್ಡಿಗಳನ್ನು ತೆರವುಗೊಳಿಸಿ ನೀರಿನ ಸರಾಗ ಹರಿಯುವಿಕೆಗೆ ಕ್ರಮಕೈಗೊಂಡಿದ್ದಾರೆ.
ವಾರ್ಡ್ನಲ್ಲಿ ನೈರ್ಮಲ್ಯಕ್ಕೆ ಸಂಬAಧಿಸಿದAತೆ ಕಸಗುಡಿಸಲು ಆಗೊಮ್ಮೆ, ಈಗೊಮ್ಮೆ ಪ.ಪಂ. ನೌಕರರು ಬರುತ್ತಾರೆ; ಕಸ ತೆಗೆದುಕೊಂಡು ಹೋಗಲು ವಾರವಾದರೂ ಲಾರಿ ಬರುವುದಿಲ್ಲ. ಈ ಬಗ್ಗೆ ವಾರ್ಡ್ ಸದಸ್ಯರ ಗಮನಕ್ಕೂ ತರಲಾಗಿದೆ. ಸದಸ್ಯರು ಸಾಮಾನ್ಯ ಸಭೆಗಳಲ್ಲಿ ಪ್ರಸ್ತಾಪಿಸಿದರೂ ಆಡಳಿತದಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.