ಮಡಿಕೇರಿ, ಆ. ೧೧: ಕೊಡಗು ಜಿಲ್ಲೆಯಲ್ಲಿ ಮಳೆರಾಯ ಅಬ್ಬರ ಕೊಂಚ ಕಡಿಮೆಯಾದರೂ, ಅನಾಹುತಗಳು ಮಾತ್ರ ನಿಲ್ಲುತ್ತಿಲ್ಲ. ಅಲ್ಲಲ್ಲಿ ಬರೆಗಳು ಕುಸಿತ, ಮನೆಗಳ ಹಾನಿ, ಭೂಮಿ ಬಿರುಕು, ಆಸ್ತಿಪಾಸ್ತಿಗಳಿಗೆ ನಷ್ಟ ಸಂಭವಿಸುತ್ತಲಿವೆ. ಇದರೊಂದಿಗೆ ಮಡಿಕೇರಿ ಹಾಗೂ ಮಂಗಳೂರು ರಾಷ್ಟಿçÃಯ ಹೆದ್ದಾರಿ ೨೭೫ರಲ್ಲಿ ಬರೆ ಕುಸಿತ, ರಸ್ತೆಯಲ್ಲಿ ಬಿರುಕುಗಳು ಸೃಷ್ಟಿಯಾಗಿವೆ. ಈ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಮಡಿಕೇರಿ-ಮಂಗಳೂರು ಹೆದ್ದಾರಿ ಮೇಲೆ ತೀವ್ರ ನಿಗಾ ಇರಿಸಿದ್ದು, ರಸ್ತೆ ಸುರಕ್ಷತೆಗೆ ಬರೆಗಳಲ್ಲಿರುವ ಮಣ್ಣನ್ನು ತೆರವು ಕಾರ್ಯಾಚರಣೆಗೆ ಮುಂದಾಗಿದೆ.
೨೦೧೮, ೨೦೧೯ ಹಾಗೂ ೨೦೨೦ರಲ್ಲಿ ಕೊಡಗಿನಲ್ಲಿ ಸುರಿದ ಭಾರೀ ಮಳೆ ಜಿಲ್ಲೆಯನ್ನು ನಲುಗಿಸಿತ್ತು. ಈ ವರ್ಷವೂ ಕೊರೊನಾ ಪರಿಸ್ಥಿತಿಯ ನಡುವೆ ಮಳೆ ಅವಾಂತರವನ್ನು ಉಂಟು ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದರಲ್ಲಿಯೂ ಕಳೆದ ವರ್ಷಗಳಲ್ಲಿ ಭಾರೀ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಏಕೈಕ ಹೆದ್ದಾರಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಚಾರಕ್ಕೆ ಪ್ರತಿಕೂಲ ಪರಿಣಾಮ ಉಂಟಾಗಿತ್ತು. ಈ ಹಿನ್ನೆಲೆ ಈ ಬಾರಿ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಲಾಗಿದೆ.
ಬರೆಗಳಲ್ಲಿ ಕಾರ್ಯಾಚರಣೆ
ಮಡಿಕೇರಿ ಹಾಗೂ ಮಂಗಳೂರು ಹೆದ್ದಾರಿಯ ಬದಿಗಳಲ್ಲಿ ಬೃಹತ್ ಬರೆಗಳು ಇವೆ. ಮಳೆಗಾಲದಲ್ಲಿ ಹೆದ್ದಾರಿ ಸಂಚಾರ ಕೊಂಚ ಭಯವನ್ನು ಹುಟ್ಟಿಸುತ್ತದೆ. ೨೦೧೮ರ ಈಚೆಗೆ ಮಳೆಗಾಲದಲ್ಲಿ ಬರೆಗಳ ಕುಸಿತ ಸಾಮಾನ್ಯವಾಗಿದೆ. ಈ ಬಾರಿಯೂ ಹೆದ್ದಾರಿಯ ಅಲ್ಲಲ್ಲಿ ಬರೆಗಳು ಕುಸಿತಗೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಬರೆಗಳಲ್ಲಿರುವ ಮಣ್ಣುಗಳನ್ನು ತೆರವು ಮಾಡುವ ಕಾರ್ಯಾಚರಣೆಗೆ ಹೆದ್ದಾರಿ ಪ್ರಾಧಿಕಾರ ಕಾರ್ಯೋನ್ಮುಖ ಗೊಂಡಿದೆ. ಈ ಹಿನ್ನೆಲೆ ರಾತ್ರಿ ಸಂಚಾರಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು.
ಮದೆನಾಡುವಿನಿಂದ ಅನತಿ ದೂರದ ಕರ್ತೋಜಿಯ ಒಂದು ಭಾಗದಲ್ಲಿ ಭಾರೀ ಬರೆ ಕುಸಿತಗೊಂಡು ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿರುವ ಬೆನ್ನಲ್ಲೇ ಪಕ್ಕದಲ್ಲಿಯೇ ಮತ್ತೊಂದು ದೊಡ್ಡ ಬರೆ ಕುಸಿತಗೊಂಡಿತ್ತು. ಬರೆ ಕುಸಿತವಾದರೆ ಮಣ್ಣು ರಸ್ತೆಗೆ ಬಂದು ಸಂಚಾರ ಬಂದ್ ಆಗುವ ಸಾಧ್ಯತೆಗಳಿವೆ. ಇದನ್ನು ಮನಗಂಡು ಬರೆಗಳ ಒಂದು ಭಾಗವನ್ನು ತೆರವು ಮಾಡಲಾಗುತ್ತಿದೆ.
ಮಣ್ಣನ್ನು ತೆರವು ಮಾಡಲು ಒಟ್ಟು ೫ ‘ಎಕ್ಸ್ಕವೇಟರ್’, ಒಂದು ರೋಲರ್ ವಾಹನಗಳ ಮೂಲಕ ಹಂತಹAತವಾಗಿ ಬರೆಯನ್ನು ಅಗೆದು ಮಣ್ಣನ್ನು ಟಿಪ್ಪರ್ಗಳ ಮೂಲಕ ಬೇರೆಡೆಗೆ ರವಾನಿಸಲಾಗುತ್ತಿದೆ. ಇದಕ್ಕಾಗಿ ೩೦ಕ್ಕೂ ಹೆಚ್ಚು ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ತೆರವು ಕಾರ್ಯದಿಂದ ನೂರಾರು ಲೋಡ್ ಮಣ್ಣು ಸಂಗ್ರಹಗೊಳ್ಳುತ್ತಿದೆ.
ಬರೆಗಳ ಮಣ್ಣು ತೆರವಿನಿಂದ ದೊಡ್ಡ ಮಟ್ಟದ ಅಪಾಯದಿಂದ ಪಾರಾಗಬಹುದು. ಬರೆ ಜರಿದರು ಇಡೀ ರಸ್ತೆಗೆ ಮಣ್ಣು ಬೀಳುವುದಿಲ್ಲ. ಹಾಗಾಗಿ ಈ ಕ್ರಮವಹಿಸಲಾಗಿದೆ. ಈಗಾಗಲೇ ೩ ಹಂತಗಳಲ್ಲಿ ಬರೆಗಳನ್ನು ತೆರವು ಮಾಡಲಾಗಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಪ್ರಾಧಿಕಾರದ ಸೂಪರ್ಡೆಂಟ್ ವೆಂಕಟೇಶ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
(ಮೊದಲ ಪುಟದಿಂದ)
ವಿದ್ಯುತ್ ಕಂಬಗಳ ಸ್ಥಳಾಂತರ
ಬರೆ ಕುಸಿಯುವ ಜಾಗದಲ್ಲಿದ್ದ ೩೫ಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ‘ಹೈಡ್ರೋಲಿಕ್’ ಯಂತ್ರಗಳ ಮೂಲಕ ಮತ್ತೊಂದು ಬದಿಗೆ ಸ್ಥಳಾಂತರ ಮಾಡಲಾಗಿದೆ. ಬರೆ ಕುಸಿದು ವಿದ್ಯುತ್ ಕಂಬ ಹಾಗೂ ತಂತಿಗಳು ಧರಾಶಾಯಿಯಾದರೆ ವಿದ್ಯುತ್ ಪೂರೈಕೆಗೆ ತೊಡಕು ಉಂಟಾಗುತ್ತದೆ ಇದನ್ನು ತಡೆಯುವ ನಿಟ್ಟಿನಲ್ಲಿ ಪ್ರಾಧಿಕಾರದ ಸಲಹೆಯಂತೆ ಸೆಸ್ಕ್ ಈ ಕಾರ್ಯ ಮಾಡುತ್ತಿದೆ. ಹೆದ್ದಾರಿಯ ಅನೇಕ ಕಡೆಗಳಲ್ಲಿ ಕಂಬಗಳನ್ನು ಸ್ಥಳಾಂತರ ಮಾಡಲಾಗಿದೆ.
ವಾಹನ ದಟ್ಟಣೆ ಎದುರಾಗದಂತೆ ಕ್ರಮ
ಹೆದ್ದಾರಿ ಬದಿಯಲ್ಲಿರುವ ಬರೆಗಳು ಕುಸಿಯುವ ಜಾಗದಲ್ಲಿ ವಾಹನ ದಟ್ಟಣೆ ಎದುರಾಗದಂತೆ ಪೊಲೀಸ್ ಇಲಾಖೆ ಮುಂದಾಗಿದೆ. ಕರ್ತೋಜಿಯಲ್ಲಿ ಸದ್ಯಕ್ಕೆ ೨ ಪಾಳಿಯಲ್ಲಿ ಪೊಲೀಸರನ್ನು ನಿಯೋಜಿಸಿದೆ.
ರಸ್ತೆಯ ೨ ತುದಿಗಳಲ್ಲಿ ಪೊಲೀಸರನ್ನು ನೇಮಿಸಿದ್ದು, ಒಂದೊAದೆ ವಾಹನ ತೆರಳಲು ಅವಕಾಶ ಮಾಡಿಕೊಡಲಾಗಿದೆ. ತಾ. ೧೦ ಹಾಗೂ ೧೧ ರಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ರಾತ್ರಿ ೮.೩೦ ರಿಂದ ಬೆಳಿಗ್ಗೆ ೬.೩೦ರ ತನಕ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದರು. ಜೊತೆಗೆ ಭಾರಿ ವಾಹನಗಳ ಸಂಚಾರ ನಿಷೇಧ ಮುಂದುವರೆದಿದೆ. ಕುಸಿಯುವ ಹಂತದಲ್ಲಿರುವ ಬರೆಗಳಿರುವ ಜಾಗದಲ್ಲಿ ಪೊಲೀಸ್ ಇಲಾಖೆ ಬ್ಯಾರಿಕೇಡ್ ಅನ್ನು ಅಳವಡಿಸಿದೆ.
ರಸ್ತೆಗಳಲ್ಲಿ ಬಿರುಕು
ಹೆದ್ದಾರಿ ನಡುವಿನ ಕೆಲವೆಡೆ ರಸ್ತೆಯ ಅಲ್ಲಲ್ಲಿ ಬಿರುಕುಗಳು ಕಂಡು ಬಂದಿವೆ. ಇದು ಕೂಡ ಆತಂಕಕ್ಕೆ ಕಾರಣವಾಗಿದ್ದು, ಮಳೆಗಾಲದ ಹಿನ್ನೆಲೆ ಬಿರುಕು ಮುಚ್ಚಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಹೆದ್ದಾರಿ ನಡುವೆ ಸಿಗುವ ದೇವರಕೊಲ್ಲಿ ಪ್ರದೇಶದಲ್ಲಿ ರಸ್ತೆ ಕುಸಿದ ಪರಿಣಾಮ ಪಕ್ಕದಲ್ಲಿದ್ದ ಬ್ರಿಟಿಷ್ ಕಾಲದ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಒಟ್ಟಾರೆಯಾಗಿ ಮಳೆಗಾಲ ಬಂತೆAದರೆ ಮಡಿಕೇರಿ ಹಾಗೂ ಮಂಗಳೂರು ಹೆದ್ದಾರಿಯಲ್ಲಿ ಏನಾಗುತ್ತದೆ ಎಂಬ ಭಯ ಆ ರಸ್ತೆ ಸಾಗುವ ಮಧ್ಯೆ ಸಿಗುವ ಗ್ರಾಮಗಳ ಜನರನ್ನು ಕಾಡುತ್ತದೆ. ಅಲ್ಲದೆ, ಜಿಲ್ಲೆಯಿಂದ ಮಂಗಳೂರಿಗೆ ಆರೋಗ್ಯ ಸೇವೆ ಪಡೆಯಲು ಸೇರಿದಂತೆ ಇನ್ನಿತರ ಕೆಲಸಗಳಿಗೆ ತೆರಳುವವರು ರಸ್ತೆ ಕಡಿತಗೊಂಡರೆ ಮುಂದೇನು ಎಂಬ ಆತಂಕದಲ್ಲಿದ್ದಾರೆ.
- ವರದಿ : ಹೆಚ್.ಜೆ. ರಾಕೇಶ್, ಚಿತ್ರ : ಲಕ್ಷಿö್ಮÃಶ್