ಮುಳ್ಳೂರು, ಆ. ೧೧: ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಆಲೂರು-ಸಿದ್ದಾಪುರ ಸರಕಾರಿ ಪ.ಪೂ. ಕಾಲೇಜು ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಚೆಸ್ ಪಂದ್ಯಾವಳಿಯನ್ನು ಆಲೂರು ಸಿದ್ದಾಪುರ ಸರಕಾರಿ ಪ.ಪೂ. ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಚೆಸ್ ಪಂದ್ಯಾವಳಿಯನ್ನು ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಪಿ.ಎನ್.ಗಂಗಾಧರ್ ಉದ್ಘಾಟಿಸಿದರು.

ಕಾಲೇಜಿನ ಹಿರಿಯ ಉಪನ್ಯಾಸಕ ಗಣಪತಿ ಭಟ್ ಮಾತನಾಡಿ, ಪ್ರತಿಯೊಂದು ಕ್ರೀಡೆಯೂ ದೈಹಿಕ ಶ್ರಮದಿಂದ ಆಡುವ ಆಟವಾಗಿರುತ್ತದೆ. ಆದರೆ ಚೆಸ್ ಬುದ್ದಿಶಕ್ತಿ ಮತ್ತು ಚತುರತೆಯಿಂದ ಆಡುವ ಮತ್ತು ಬೌದ್ದಿಕ ಮಟ್ಟವನ್ನು ಹೆಚ್ಚಿಸುವ ಕ್ರೀಡೆಯಾಗಿದೆ ಎಂದರು.

ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೀಲಾಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ವೃದ್ದಿಸುತ್ತದೆ ಎಂದರು.

ಕಾಲೇಜು ಪ್ರಾಂಶುಪಾಲ ಶಿವಕುಮಾರ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕೆ.ಬಿ. ಶಿವಣ್ಣ ಮಾತನಾಡಿದರು.

ಸಮಾರಂಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ದಮಯಂತಿ ಕರುಂಬಯ್ಯ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶ್ರುತಿ, ಹಿರಿಯ ಉಪನ್ಯಾಸಕ ಮಲ್ಲೇಶ್, ಉಪನ್ಯಾಸಕ ವಿಶ್ವನಾಥ್, ಉಪನ್ಯಾಸಕಿ ರಾಘವಿ ವಿವಿಧ ಪ.ಪೂ. ಕಾಲೇಜುಗಳ ಮುಖ್ಯಸ್ಥರು, ತೀರ್ಪುಗಾರರು ಹಾಜರಿದ್ದರು.

ಸೋಮವಾರಪೇಟೆ ತಾಲೂಕಿನಿಂದ ೧೦ ಪ.ಪೂ. ಕಾಲೇಜುಗಳ ಕ್ರೀಡಾಪಟುಗಳು ಚೆಸ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.