ವೀರಾಜಪೇಟೆ, ಆ. ೯: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ವೀರಾಜಪೇಟೆಯಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಮಾರಿಯಮ್ಮ ದೇವಾಲಯದಿಂದ ಪಂಜಿನ ಮೆರವ ಣಿಗೆಯನ್ನು ಆರಂಭಿಸಲಾಯಿತು. ಕೆ. ಉಲ್ಲಾಸ್ ಅವರು ಚಾಲನೆ ನೀಡಿದರು.
ಮಳೆಯ ನಡುವೆಯೂ ಆರಂಭವಾದ ಪಂಜಿನ ಮೆರವಣಿಗೆಗೆ ಅಪಾರ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಆಗಮಿಸಿದ್ದರು. ಭಗವಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ನಗರದ ಪ್ರಮುಖ ಭಾಗಗಳಾದ ದೊಡ್ಡಟ್ಟಿಚೌಕಿ, ಗಡಿಯಾರ ಕಂಬ, ಖಾಸಗಿ ಬಸ್ ನಿಲ್ದಾಣ, ಮಾಂಸ ಮಾರುಕಟ್ಟೆ ರಸ್ತೆಯ ಮೂಲಕ ಸಾಗಿ ನಗರದ ಪ್ರಮುಖ ಭಾಗಗಳಲ್ಲಿ ಒಂದು ಸುತ್ತು ಬಂದು ಬಳಿಕ ತಾಲೂಕು ಮೈದಾನದಲ್ಲಿ ಸಮಾವೇಶಗೊಂಡಿತು.
ಪೊಲೀಸ್ ಉಪ ಅಧೀಕ್ಷಕ ನಿರಂಜನ ರಾಜೇ ಅರಸ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಗರದ ಹೊರವಲಯದಲ್ಲಿ ನಾಕಾಬಂಧಿ ಹಾಕುವ ಮೂಲಕ ನಗರದ ಹೊರ ಹೋಗುವ ಹಾಗೂ ಒಳ ಬರುವ ವಾಹನಗಳ ಮೇಲೆ ಪೊಲೀಸರು ನಿಗಾವಹಿಸಿದ್ದರು. ಮೆರವಣಿಗೆಯಲ್ಲಿ ಹಿಂದೂ ಸಂಘಟನೆಯ ಪ್ರಮುಖರಾದ ಬಿ.ಎನ್ ಕುಮಾರ್, ವಿವೇಕ್ ರೈ, ಹೇಮಂತ್, ಸಾಯಿನಾಥ್ ನಾಯಕ್ ಮಾಳೇಟಿರ ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು. ಹಿಂದೂ ಕಾರ್ಯ ಕರ್ತರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.