ಮಡಿಕೇರಿ, ಆ. ೧೦: ಇಲ್ಲಿನ ರೆಡ್ ಕ್ರಾಸ್ ಕಟ್ಟಡದ ಕಾಳಜಿ ಕೇಂದ್ರದಲ್ಲಿ ಸೇರಿಸಲಾಗಿದ್ದ ಸುಮಾರು ೧೨೦ ಸಂತ್ರಸ್ತರು ಇಂದು ಅಧಿಕಾರಿಗಳ ಸೂಚನೆಯಂತೆ ದಿಢೀರಾಗಿ ಮನೆಗೆ ಮರಳಿದ ಸನ್ನಿವೇಶ ನಡೆದಿದೆ.

ಎರಡನೇ ಮೊಣ್ಣಂಗೇರಿಯಲ್ಲಿ ಮನೆಗಳು ಅಪಾಯಕರ ಸ್ಥಿತಿಯಲ್ಲಿದ್ದು, ಕೂಡಲೇ ಕಾಳಜಿ ಕೇಂದ್ರಕ್ಕೆ ಬರುವಂತೆ ಜಿಲ್ಲಾ ಆಡಳಿತ ಒತ್ತಾಯಿಸಿ, ತಾ. ೬ ರಂದು ಸಂತ್ರಸ್ತರು ಆಗಮಿಸಿದ್ದರು.

ಇವರ ಜೀವ ರಕ್ಷಣೆಗೆ ಸ್ಥಳಾಂತರವೊAದೇ ಪರಿಹಾರ ಎಂದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಹೇಳಿದ್ದರು. ಆದರೆ ಇಂದು ಆಶ್ರಯಕ್ಕೆ ಸ್ಥಳ ಒದಗಿಸಿದ ರೆಡ್ ಕ್ರಾಸ್ ಸಂಸ್ಥೆಗೂ ತಿಳಿಸದೆ, ಆಶ್ರಿತರು ಕೂಡಲೇ ಸ್ಥಳ ಖಾಲಿ ಮಾಡುವಂತೆ ಜಿಲ್ಲಾ ಆಡಳಿತ ಆತುರದ ಕ್ರಮಕೈಗೊಂಡು ಅಚ್ಚರಿ ಮೂಡಿಸಿದೆ.

ತಮಗೆ ಸಿಕ್ಕ ಹಾಸಿಗೆ, ಪಾತ್ರೆ ಇತ್ಯಾದಿ ಸೌಲಭ್ಯಗಳನ್ನು ವಾಹನಗಳಲ್ಲಿ ತುಂಬಿಕೊAಡು ಹೊರಡುತ್ತಿದ್ದ ಮಂದಿಯನ್ನು ಪ್ರಶ್ನಿಸಿದಾಗ ಹಲವರು ಅಸಮಾಧಾನ ವ್ಯಕ್ತಪಡಿಸಿದರು. ಮಳೆ ಇನ್ನೂ ನಿಂತಿಲ್ಲ, ಮನೆಗಳಿಗೆ ತೆರಳುವ ರಸ್ತೆ ಕುಸಿದಿದೆ. ಯಾವ ಕ್ಷಣದಲ್ಲಿ ಏನಾಗುತ್ತದೋ ಗೊತ್ತಿಲ್ಲ. ಹೀಗಿದ್ದರೂ ನಮ್ಮನ್ನು ಒತ್ತಾಯ ಪೂರ್ವಕವಾಗಿ ಕಳುಹಿಸುತ್ತಿದ್ದಾರೆ ಎಂದು ಎರಡನೇ ಮೊಣ್ಣಂಗೇರಿಯ ತಿರುಮಲೇಶ್, ಚೆಂಗಪ್ಪ, ಈರಪ್ಪ ಹಾಗೂ ಇತರರು ಕಳವಳ ವ್ಯಕ್ತಪಡಿಸಿದ್ದಾರೆ.

ಸ್ಥಳದಲ್ಲಿ ಹಾಜರಿದ್ದು, ಸ್ಥಳಾಂತರ ಉಸ್ತುವಾರಿ ನಡೆಸುತ್ತಿದ್ದ ತಹಶೀಲ್ದಾರ್ ಮಹೇಶ್ ಅವರನ್ನು ಈ ಕುರಿತು ‘ಶಕ್ತಿ’ ಪ್ರಶ್ನಿಸಿತು. ‘ಇಲ್ಲ, ಅವರಾಗೇ ಹೋಗುತ್ತೇವೆ ಅಂದ್ರು, ಕಳಿಸುತ್ತಿದ್ದೇವೆ’ ಎಂದು ಮಹೇಶ್ ಉತ್ತರಿಸಿದರು. ಮಳೆ ಇನ್ನೂ ಕಡಿಮೆಯಾಗಿಲ್ಲ, ಅಪಾಯ ದೂರವಾಗಿಲ್ಲ ಎಂಬ ಮಾತನ್ನು ಅವರಿಗೆ ಹೇಳಲಾಯಿತು. ‘ಇಲ್ಲ, ಇಲ್ಲ ಅವರೇ ಹೋಗ್ತಿರೋದು’ ಎಂದು ತಹಶೀಲ್ದಾರ್ ಮತ್ತೆ ನುಡಿದರು.

ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಮುಖ್ಯಸ್ಥ ರವೀಂದ್ರ ರೈ ಸ್ಥಳಾಂತರದ ಕುರಿತು ತಮಗೆ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ ಎಂದರು. ಸಂಸ್ಥೆಯ ಕಟ್ಟಡದಲ್ಲಿ ಸಂತ್ರಸ್ತರಿಗೆ ಸದಾ ಆಹ್ವಾನವಿದೆ ಎಂದರು.

ಸAತ್ರಸ್ತರು ಗಡಿಬಿಡಿಯಲ್ಲಿ ತಮಗೆ ದೊರೆತ ಅಷ್ಟಷ್ಟು ಸೌಲಭ್ಯಗಳನ್ನು ವಾಹನಗಳಿಗೆ

(ಮೊದಲ ಪುಟದಿಂದ) ಹೇರುತ್ತಿದ್ದಾಗ ನೆರೆದಿದ್ದ ಕೆಲವರು ಸ್ಥಳಾಂತರಕ್ಕೆ ಇವರೇ ಕಾರಣ ಎನ್ನುತ್ತಿದ್ದರು. ಕೇಂದ್ರದಲ್ಲಿ ೧೨೦ ಮಂದಿ ಇದ್ದು, ಎಲ್ಲರಿಗೂ ಪ್ರತ್ಯೇಕ ಸೌಲಭ್ಯ ದೊರೆತಿದ್ದರೂ ಅಲ್ಲಿ ಉಳಿಯುತ್ತಿದ್ದುದು ೩೦-೩೫ ಮಂದಿ ಮಾತ್ರ ಎಂದು ಆಪಾದಿಸಿದರು. ಇತರರು ದಿನದಲ್ಲಿ ಕೆಲವು ಗಂಟೆ ಮಾತ್ರ ಇದ್ದು, ಮರಳುತ್ತಿದ್ದರು. ಈ ಬಗ್ಗೆ ಸಂತ್ರಸ್ತರಲ್ಲಿ ವಿಚಾರಿಸಿದಾಗ, ‘ಹೌದು, ಮನೆಯಲ್ಲಿ ಹಸು-ಕರು ನೋಡಿಕೊಳ್ಳಲು ಹೋಗಬೇಕಾಯ್ತು. ತೋಟದ ಕೆಲಸ ಮಾಡಬೇಕಾಯ್ತು’ ಆದರೆ ಅಧಿಕಾರಿಗಳು ನಮ್ಮೊಡನೆ ಕುಳಿತು ಮಾತನಾಡಬೇಗಿತ್ತು ಎಂದರು.

-ಅನAತ್