ವೀರಾಜಪೇಟೆ, ಆ. ೮: ವೀರಾಜಪೇಟೆ ಹೋಬಳಿ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಮೆಕಾಡು ಪೈಸಾರಿಯಲ್ಲಿ ಕಳೆದ ೭೦ ವರ್ಷಗಳಿಂದ ವಾಸವಿದ್ದರೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಪ್ರೋ ಕೃಷ್ಣಪ್ಪ ಬಣ) ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಬಿ ನಾಗೇಶ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು, ಸರ್ವೆ ಸಂಖ್ಯೆ ೩೧೫/೧ಪಿ೧ ರಲ್ಲಿ ಒಟ್ಟು ೬೩ ಎಕರೆ ಪೈಸಾರಿ ಜಾಗದಲ್ಲಿ ೬೦ ಮನೆಗಳಿದ್ದು ಸರ್ಕಾರ ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ರಾಜ್ಯ ಉಚ್ಚ ನ್ಯಾಯಾಲಯದ ಆದೇಶ ಇದೆ ಎಂದು ಸರ್ಕಾರಿ ಅಧಿಕಾರಿಗಳು ಜಾಗದಲ್ಲಿರುವ ಕಾಫಿಗಿಡಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಿದ್ದಾರೆ. ಮನೆಗಳನ್ನು ಬಿಟ್ಟು ಜಾಗವನ್ನು ತೆರವುಗೊಳಿಸಿದ್ದಾರೆ. ಅಲ್ಪಸ್ವಲ್ಪ ಜಾಗವನ್ನು ತೆರವುಗೊಳಿಸಿರುವುದರ ವಿರುದ್ಧ ಅಲ್ಲಿರುವ ೨೦ ಕುಟುಂಬಗಳು ಸೇರಿ ಕಾಂಗ್ರೆಸ್ ಮುಖಂಡ ಹಾಗು ವಕೀಲ ಎ.ಎಸ್ ಪೊನ್ನಣ್ಣ ಅವರ ಮೂಲಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ (ರಿಟ್ ಸಂಖ್ಯೆ ೧೫೪೪೬/೨೦೨೨ ಕೆ.ಎಲ್‌ಆರ್-ಆರ್‌ಇಎಸ್) ಸರ್ಕಾರ ನಮ್ಮ ಜಾಗವನ್ನು ತೆರವುಗೊಳಿಸದ ರೀತಿಯಲ್ಲಿ ತಡೆಯಾಜ್ಞೆ ತರಲಾಗಿದೆ.

ಜಾಗ ಉಳ್ಳ ಭೂ ಮಾಲೀಕರ ಎಕರೆಗಟ್ಟಲೆ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದರು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳದ ಸರ್ಕಾರ ಬಡ ಕೂಲಿ ಕಾರ್ಮಿಕರ ಮೇಲೆ ಗದ ಪ್ರಹಾರ ನಡೆಸುತ್ತಿದೆ. ಅಲ್ಲದೆ ಇದೇ ಗ್ರಾಮದಲ್ಲಿ ಗ್ರಾಮಕ್ಕೆ ಸಂಬAಧಪಡದ ಕೆಲವು ವ್ಯಕ್ತಿಗಳು ಹಾಗೂ ಕೆಲವು ದಲಿತ ಪರ ಸಂಘಟಣೆಗಳು ಹಸ್ತಕ್ಷೇಪ ನಡೆಸಿ ಕಾಲೋನಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ವೀರಾಜಪೇಟೆ ಹೋಬಳಿ ಸಂಚಾಲಕಿ ಗೀತಾ, ಸದಸ್ಯರಾದ ವೈ.ಎಂ ಗಣೇಶ್, ಮನೋಜಾ, ಮುತ್ತಮ್ಮ ಉಪಸ್ಥಿತರಿದ್ದರು.