ಸೋಮವಾರಪೇಟೆ, ಆ. ೯: ರಾಜ್ಯ ಕಾನೂನು ಹಾಗೂ ಸಣ್ಣ ನೀರಾವರಿ ಇಲಾಖಾ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಭೇಟಿ ನೀಡಿ ಸಣ್ಣ ನೀರಾವರಿ ಇಲಾಖೆಯಿಂದ ಪ್ರಗತಿಯಲ್ಲಿರುವ ಸೇತುವೆ ಕಾಮಗಾರಿಗಳನ್ನು ಪರಿಶೀಲಿಸಿದರು.
ಕುಮಾರಳ್ಳಿ ಗ್ರಾಮದಲ್ಲಿ ೨ ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಸೇತುವೆಯನ್ನು ವೀಕ್ಷಿಸಿದ ಸಚಿವರು, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವಂತೆ ಸೂಚಿಸಿದರು. ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಸಂಪರ್ಕ ಅತಿ ಮುಖ್ಯವಾಗಿದೆ. ಕೃಷಿಕರ ದೈನಂದಿನ ಚಟುವಟಿಕೆ, ಕೃಷಿ ಸಾಮಗ್ರಿಗಳ ಸಾಗಾಟಕ್ಕೆ ರಸ್ತೆ ಅವಶ್ಯಕ. ಈ ಗ್ರಾಮದಲ್ಲಿ ಬೃಹತ್ ಯೋಜನೆಯ ಮೂಲಕ ಸೇತುವೆ ನಿರ್ಮಾಣ ಮಾಡುತ್ತಿರುವುದರಿಂದ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವರು ಅಭಿಪ್ರಾಯಿಸಿದರು.
ಮಲ್ಲಳ್ಳಿಗೆ ಭೇಟಿ: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಇತರ ಪ್ರಮುಖರೊಂದಿಗೆ ತಾಲೂಕಿನ ಪ್ರಸಿದ್ಧ ಮಲ್ಲಳ್ಳಿ ಜಲಪಾತಕ್ಕೆ ಭೇಟಿ ನೀಡಿದ ಮಾಧುಸ್ವಾಮಿ ಅವರು, ಜಲಪಾತದ ಸೊಬಗಿಗೆ ಮಾರು ಹೋದರು. ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿರುವ ಮಲ್ಲಳ್ಳಿ ಜಲಪಾತದ ಅರ್ಧ ಭಾಗದ ವರೆಗೆ ತೆರಳಿದ ಸಚಿವರು, ಪ್ರಕೃತಿ ನಿರ್ಮಿತ ಸೌಂದರ್ಯದ ಖನಿಯಾಗಿರುವ ಜಲಪಾತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಲ್ಲಳ್ಳಿಯಲ್ಲಿ ಧುಮ್ಮಿಕ್ಕುವ ಈ ಹೊಳೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಾಗಿದ್ದು, ಪ್ರವಾಸಿ ತಾಣವಾಗಿ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಸಣ್ಣ ನೀರಾವರಿ ಇಲಾಖೆಯಿಂದ ಜಲಪಾತದ ಅಭಿವೃದ್ಧಿಗೆ ಯೋಜನೆ ರೂಪಿಸಿದರೆ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದು ಶಾಸಕ ಅಪ್ಪಚ್ಚುರಂಜನ್ ಅವರು ಸಚಿವರ ಗಮನಕ್ಕೆ ತಂದರು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.