ಮುಳ್ಳೂರು, ಆ. ೮: ಸೋಮವಾರ ಕೊಡ್ಲಿಪೇಟೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದನೆ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿ ತೆರೆಯಲು ಅನುಮತಿ ನೀಡುವಂತೆ ಆಗ್ರಹಿಸಿ ಪೋಷಕರು ಶಾಲಾ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಆಂಗ್ಲ ಮಾಧ್ಯಮದಲ್ಲಿ ಅನುಮತಿ ನೀಡಿರುವ ಭರವಸೆಯಿಂದ ಕೊಡ್ಲಿಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಂದೆನೆ ತರಗತಿಗೆ ಮೂವತ್ತು ವಿದ್ಯಾರ್ಥಿಗಳು ದಾಖಲಾ ಗಿದ್ದರು ಮತ್ತು ವಿದ್ಯಾರ್ಥಿಗಳ ನೋಂದಣಿಗೆ ಆಗಸ್ಟ್ ತಿಂಗಳು ಕೊನೆಯ ದಿನವಾಗಿದೆ. ಸರಕಾರ ಈ ಹಿಂದೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಒಂದನೆ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿ ತೆರೆಯಲು ಅನುಮತಿ ನೀಡುವ ಆಶ್ವಾಸನೆ ನೀಡಿದ್ದ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಒಂದನೆ ತರಗತಿಗೆ ದಾಖಲಿಸಿದ್ದರು. ಮಳೆ-ಗಾಳಿ ಲೆಕ್ಕಿಸದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಆದರೆ ಸರಕಾರ ಇನ್ನೂ ಸಹ ಆಂಗ್ಲ ಮಾಧ್ಯಮಕ್ಕೆ ಅನುಮತಿ ನೀಡದಿರುವುದನ್ನು ಖಂಡಿಸಿದ ಪೋಷಕರು ಶಾಲಾ ಮುಂಭಾಗದಲ್ಲಿ ಧರಣಿ ನಡೆಸಿದರು.

ಸ್ಥಳಕ್ಕೆ ಸಂಬAಧಿಸಿದ ಅಧಿಕಾರಿ ಗಳು ಬರುವಂತೆ ಪ್ರತಿಭಟನೆಗಾರರು ಆಗ್ರಹಿಸಿದರು. ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಅನತಿ ದೂರದಲ್ಲಿ ಕೊಡ್ಲಿಪೇಟೆ ವಿಭಾಗದಲ್ಲಿ ಮಳೆಹಾನಿಯಾದ ಪ್ರದೇಶಗಳಿಗೆ ವೀಕ್ಷಣೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಮತ್ತು ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರುಗಳು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಬಂದು ಕನಿಷ್ಟ ಪಕ್ಷ ಧರಣಿ ನಡೆಸುತ್ತಿರುವ ಬಗ್ಗೆ ವಿಚಾರಣೆ ಮಾಡಿಲ್ಲ ಎಂದು ಪ್ರತಿಭಟನೆಗಾರರು ಬೇಸರ ವ್ಯಕ್ತಪಡಿಸಿ ದರು. ಕೊನೆಗೆ ಪ್ರತಿಭಟನೆಗಾರರು ಸಮೀಪದ ಕೆಳಕೊಡಲಿ ಗ್ರಾಮಕ್ಕೆ ತೆರಳಿ ಮಳೆಗೆ ಹಾನಿಯಾದ ಮನೆ ಹಾನಿಯಾದ ಸ್ಥಳದಲ್ಲಿ ವೀಕ್ಷಣೆ ಮಾಡುತ್ತಿದ್ದ ಸಚಿವರಿಗೆ ಮನವಿ ಪತ್ರ ನೀಡಿದರು.

ಧರಣಿಯಲ್ಲಿ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿ ಡಿ.ಎನ್. ವಸಂತ್, ಅಧ್ಯಕ್ಷ ಕೆ.ಆರ್. ಚಂದ್ರಶೇಖರ್, ರಾಜೇಶ್ ಕಾಳಯ್ಯ, ವಿಜಯ್, ಎಸ್‌ಡಿಎಂಸಿ ಅಧ್ಯಕ್ಷೆ ಮಮತ ರಮೇಶ್, ಪೋಷಕರಾದ ಹರೀಶ್, ಬಸಪ್ಪ, ಆಲಿ, ಕವಿತಾ, ಮಮತ, ಆಶ್ರಪ್, ಅರ್ಪಿತ್ ಮುಂತಾದವರು ಪಾಲ್ಗೊಂಡಿದ್ದರು.

-ಭಾಸ್ಕರ್ ಮುಳ್ಳೂರು