ಕುಶಾಲನಗರ, ಆ.೭ : ಆಹಾರ ಪದ್ಧತಿಯಲ್ಲಿ ಬದಲಾವಣೆ ಆದಲ್ಲಿ ರೋಗ ರುಜಿನಗಳು ಸೃಷ್ಟಿಯಾಗಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ನಿವೃತ್ತ ಶಿಕ್ಷಕಿ ಕೊಳಂಬೆ ಯಮುನಾ ರಾಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ಗೌಡ ಸಮಾಜದಲ್ಲಿ ಪದ್ಮಾವತಿ ಗೌಡ ಮಹಿಳಾ ಒಕ್ಕೂಟ ಮತ್ತು ಗೌಡ ಮಹಿಳಾ ಸ್ವಸಹಾಯ ಸಂಘದ ಆಶ್ರಯದಲ್ಲಿ ನಡೆದ' ಆಟಿ ಸಂಭ್ರಮ' ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಆಹಾರದಲ್ಲಿ ಹಳೆಯ ಪದ್ಧತಿಗಳನ್ನು ಬಳಸಿಕೊಂಡಲ್ಲಿ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ ಎಂದರು.

ಪದ್ಮಾವತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜಬ್ಬನ ಲತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಮಾತನಾಡಿ, ಗೌಡ ಸಮಾಜ ಸಮುದಾಯವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ಸಮುದಾಯಕ್ಕೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯದ ಜೊತೆಗೆ ರಾಜಕೀಯ ಅಗತ್ಯತೆ ಬಗ್ಗೆ ಜನಾಂಗದ ಸದಸ್ಯರಿಗೆ ಮಾಹಿತಿ ಒದಗಿಸಲಾಗುವುದು ಎಂದರು.

ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೂರನ ಪ್ರಕಾಶ್ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು. ಈ ಸಂದರ್ಭ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷ ಕುಲ್ಲಚನ ಭಾಗಿರಥಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ದೇವಜನ ಚಿಣ್ಣಪ್ಪ, ಕೊಡಗು ಅರೆಭಾಷೆ ಯುವಕ ಸಂಘದ ಅಧ್ಯಕ್ಷ ಕುಂತಜೆ ದಯಾನ್ ಇದ್ದರು.

ಕುಶಾಲನಗರ ಗೌಡ ಸಮಾಜದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಟಿಸೊಪ್ಪಿನಿಂದ ತಯಾರಿಸಿದ ಹಲವು ರೀತಿಯ ಖಾದ್ಯಗಳನ್ನು, ಕಣಿಲೆಯಿಂದ ತಯಾರಿಸಿದ ಹಲವು ಖಾದ್ಯಗಳು ಪತ್ರೊಡೆ, ಮಾವಿನ ಹಣ್ಣಿನ ಸಾರು, ಮೀನು, ಕೋಳಿ ಸೇರಿದಂತೆ ಹಲವು ಬಗೆಯ ವೈನ್ ಮತ್ತು ವಿಶೇಷ ಖಾದ್ಯಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಕುಶಾಲನಗರ ಪದ್ಮಾವತಿ ಗೌಡ ಮಹಿಳಾ ಒಕ್ಕೂಟ, ಮತ್ತು ಗೌಡ ಮಹಿಳಾ ಸ್ವಸಹಾಯ ಸಂಘ ದ ಸದಸ್ಯರು ತಮ್ಮ ಮನೆಗಳಿಂದ ತಾವೇ ತಯಾರಿಸಿ ತಂದ ನೂರಕ್ಕೂ ಅಧಿಕ ರೀತಿಯ ಖಾದ್ಯಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಕಾರ್ಯಕ್ರಮದಲ್ಲಿ ಪಟ್ಟಂದಿ ಬೀನಾ ಸೀತಾರಾಮ್ ಸ್ವಾಗತಿಸಿ, ಬೈಮನ ಭೋಜಮ್ಮ ನಿರೂಪಿಸಿದರು. ಸೂದನ ಲೀಲಾ ಗೋಪಾಲ್ ವಂದಿಸಿದರು.