ವೀರಾಜಪೇಟೆ, ಆ. ೭: ವೀರಾಜಪೇಟೆ ಮುಖ್ಯಾಧಿಕಾರಿಯವರು ಕಸ ವಿಲೇವಾರಿ ವಾಹನವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ಸಲ್ಲಿಸುತ್ತಿರುವುದಾಗಿ ನಾಗರಿಕ ಸಮಿತಿಯ ಸಂಚಾಲಕರಾದ ಡಾ.ದುರ್ಗಾಪ್ರಸಾದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಗೆ ಸೇರಿದ ಕಸ ವಿಲೇವಾರಿ ವಾಹನಗಳಿಗೆ ಯಾವುದೇ ರೀತಿಯಾದಂತಹ ವಿಮೆಯನ್ನು ನವೀಕರಿಸಿಲ್ಲ. ಈ ವಾಹನಗಳಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ ಎಫ್ಸಿ ಕೂಡಾ ಪಡೆಯಲಾಗಿಲ್ಲ. ಈ ವಾಹನ ಚಾಲನೆ ಮಾಡಲು ಚಾಲಕರನ್ನು ನೇಮಕ ಮಾಡಿಲ್ಲ.
ಸಹ ಸಂಚಾಲಕರಾದ ಸೋಮ ಲೋಕನಾಥ್ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ವಾಹನಗಳೇ ಕಾನೂನು ನಿಯಮವನ್ನು ಪಾಲಿಸದೇ ಸಂಚರಿಸುತ್ತಿರುವುದು ಆಕ್ಷೇಪಣೀಯ ಸಾಮಾನ್ಯ ಜನರಿಗೊಂದು ಕಾನೂನು ಸರ್ಕಾರಿ ಇಲಾಖೆಗೆ ಒಂದು ಕಾನೂನು ಎನ್ನುವಂತಾಗಿದೆ. ಆದುದರಿಂದ ಇದಕ್ಕೆ ನೇರ ಹೊಣೆ ಮುಖ್ಯಾಧಿಕಾರಿಯೇ ಆಗಿರುತ್ತಾರೆ. ನಿಯಮಬಾಹಿರವಾಗಿ ವಾಹನ ಚಾಲನೆ ಮಾಡಿಸುತ್ತಿರುವ ಅಧಿಕಾರಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಈ ಹಿನ್ನೆಲೆ ದೂರನ್ನು ನೀಡಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ನಾಗರಿಕ ಸಮಿತಿಯ ಸದಸ್ಯರಾದ ಅಬ್ದುಲ್ ರೆಹಮಾನ್ ಹಾಜರಿದ್ದರು.